Sunday, March 20, 2016

ಸ್ವಾತಂತ್ರ್ಯದ ಗುಲಾಮರು

ಹಾರುವ ಹಕ್ಕಿಗಳ ಸ್ವಾತಂತ್ರ್ಯಕೆ ಮನಸೋತೆ,
ಹರಿಯುವ ನೀರಿನಲೆಗಳ ಸ್ವೇಚ್ಛೆಗೆ ನಾ ಸೋತೆ,
ಅವರಂತೆ ನಿಶ್ಚಿಂತೆಯಾಗುವ ಕನಸನೂ ಕಟ್ಟಿದೆ,
ನೂರಾರು ಬೇಕುಗಳ ಹತ್ತಾರು ಬೇಡಗಳ ಪಟ್ಟಿಯನೂ ಬರೆದೆ.

ಜಗದ ನಿಯಮಗಳಿಂದ ಓಡಿಹೋಗಬೇಕೆಂಬ ಹಂಬಲ,
ಸರ್ವ ಬಂಧನದಿಂದ ಸ್ವತಂತ್ರನಾಗಬೇಕೆಂಬ ಚಪಲ,
ಜವಾಬ್ದಾರಿಯೇ ಸ್ವಾತಂತ್ರ್ಯದ ಮೊದಲ ಉಡುಗೊರೆ,
ನಂಬಿಕೆಯೊಳು ಬೆಳೆದ ಜವಾಬ್ದಾರಿ ಪರಂಪರೆ - ಅದುವೇ ಹೊರೆ.

ಸೋಲಿನ ಆತಂಕದಿ ಅಪೇಕ್ಷಿಸಿದೆ ಅನುಭವಿಯ ಸಲಹೆ,
ಗೆಲುವಿನ ನಶೆಯಲಿ ಹೊರೆಯಂತೆ ಕಂಡಿತು ಅದೇ ಸಲಹೆ,
ಕಾಳಜಿಯ ಮಾತುಗಳು ಅಪೇಕ್ಷೆಯ  ಮುನ್ನುಡಿ,
ಆ ಅಪೇಕ್ಷೆಯೇ ಮುಂಬರುವ ಬಂಧನದ ಕನ್ನಡಿ.

ಹಿಂದೆ ಮುಪ್ಪಿನಲಿ ಮಕ್ಕಳಾಸರೆ ಅಪೇಕ್ಷಿತವಾಗಿತ್ತು,
ಭವಿಷ್ಯದಲಿ ಕೈಯೊಡ್ಡದಂತೆ ನಿಲ್ಲುವುದೇ ಇಂದಿನ ಜರೂರತ್ತು,
ಬಂಧನದ ಈ ಹೆದರಿಕೆ ಹುಟ್ಟಿತು ನಮ್ಮಲ್ಲೇಕೆ?
ವೈರಾಗ್ಯವಲ್ಲದ ಸ್ವತಂತ್ರವಾದದ ವಿತಂಡವೇಕೆ?

ಬಂಧುಗಳನು ದೂರವಿಟ್ಟೆವು ಸ್ವಾತಂತ್ರ್ಯದ ಆಸೆಯಲಿ,
ಪರಂಪರೆಯ ಕಿತ್ತೆಸೆಯುವೆವು ಬಂಧನದ ನೆಪದಲಿ,
ಆತ್ಮೀಯತೆಯೆ ಕಾಣೆಯಾಗಿದೆ ಇದೇ ಕಾರಣದಲಿ,
ಜೀವನವೇ ಸವೆದಿದೆ ಇಸಿದು-ಕೊಡುವ ಲೆಕ್ಕಾಚಾರದಲಿ.

ಪ್ರೇಮದ ಬಂಧನವೂ ಇಂದು ಹೊರೆಯಂತೆ ಕಂಡಿದೆ,
ವೈಚಾರಿಕ ಬಂಧನವ ಕಿತ್ತೆಸೆಯಲು ಮನ ಆಶಿಸಿದೆ,
ನನಗಾರೂ ಪ್ರಶ್ನಿಸಬಾರದೆನ್ನುವ ಹಠ ಜೋರಾಗಿದೆ,
ಮನ ಬಂದಂತೆ ವರ್ತಿಸುವುದೇ ಜೀವನವಾಗಿದೆ.

ಸ್ವತಂತ್ರ ಜೀವಿಗಳ ಲೋಕವು ಉದಯಿಸುತಿದೆ,
ಇದೇ ಸ್ವಾತಂತ್ರ್ಯದ ನೆಪದಲಿ ನೆತ್ತರೂ ಹರಿದಿದೆ,
ಸ್ವಾತಂತ್ರ್ಯದ ನೆಪದಲಿ ಬಂಧನವೂ ನಡೆದಿದೆ,
ಏನಾದರೂ ಸ್ವತಂತ್ರರಾಗುವುದೇ ಎಲ್ಲರ ಉದ್ದೇಶವಾಗಿದೆ.

ಸ್ವಾತಂತ್ರ್ಯದಾಸೆಯಲಿ ಸಮಾಜದ ರೂಪವ ಬದಲಿಸಿದೆವು,
ಸ್ವಾತಂತ್ರ್ಯದಾಸೆಯಲಿ ಒಂಟಿ ಸಲಗದಂತೆ ನಿಂತೆವು,
ಇದೆಲ್ಲದರ ನಡುವೆ ಮನವು ಕಿಸಕ್ಕನೆ ನಕ್ಕಿತು,
ಸ್ವಾತಂತ್ರ್ಯದಾಸೆಯಲಿ ಸ್ವಾತಂತ್ರ್ಯದ ಗುಲಾಮನಾದೆ ನೀ ಎಂದಿತು.

Wednesday, January 21, 2015

ಆಹಾರ ಅನ್ವೇಷಣೆ

     ಎಲ್ಲೋ ಹೋಗಬೇಕಾಗಿತ್ತು ಎಂದು ಹೊರಟವನು ನಡೆಯುತ್ತಾ ಜೋರಾಗಿ ಉಸಿರೆಳೆದುಕೊಂಡೆ, ಹಾಗೆಯೇ ನಿಂತುಬಿಟ್ಟೆ. ಅದೇನು ಪರಿಮಳ!!! ಎಲ್ಲಿಂದಲೋ ಬಂದ ಗಾಳಿಯಲ್ಲಿ ತೇಲಿ ಬಂದು ನನ್ನನ್ನು ಒಂದು ಕ್ಷಣ ದಿಙ್ಮೂಧನನ್ನಾಗಿಸಿತು. ಮೆಣಸಿನಕಾಯಿ ಬಜ್ಜಿ ಮಾಡಿದರೆ ಮೋಡಿಯಾಗುವುದೆಂದು ನನಗೆ ಗೊತ್ತು. ಆದರೂ ಅದೇನೋ ವಿಚಿತ್ರ ಮಾಯೆಯಂತೆ ಪರಿಮಳ ಬರುವುದೆಂದು ನನಗೆ ಅಂದೇ ತಿಳಿದಿದ್ದು. ದಿನವೂ ಅದೇ ಹಾದಿಯಲ್ಲಿ ನಡೆದು ಹೋಗುವಾಗ ಅದೇ ಅಂಗಡಿಯವನು ಮುಗುಳ್ನಕ್ಕು ನನ್ನನ್ನು ಸನ್ನೆಯಿಂದಲೇ ಆಮಂತ್ರಿಸಿದಾಗ ಅದೇನು ವಿಶೇಷವಲ್ಲ ಎಂಬಂತೆ ನಡೆದು ಹೋಗುತ್ತಿದ್ದೆ. ಆದರೆ ಇಂದೇನೋ ವಿಶೇಷ.




     ಮೆಣಸಿನಕಾಯಿಯನ್ನು ಕತ್ತರಿಸಿದಾಗ ಬರುವ ಘಾಟು ಕಡಲೆಹಿಟ್ಟಿನ ಮಿಶ್ರಣದ ಹಸಿ ವಾಸನೆಯನ್ನು ಹೊಕ್ಕಾಗ ಅದೇನು ರಾಸಾಯನಿಕ ಕ್ರಿಯೆಯಾಗುವುದೋ? ಮಿಶ್ರಣದಲ್ಲಿಯ ಅಕ್ಕಿಹಿಟ್ಟು, ಅಜವಾನ ತಮ್ಮದೇ ಛಾಪನ್ನು ಉಳಿಸಿಕೊಳ್ಳಲು ಹೆಣಗುತ್ತಾ ಕೊನೆಗೆ ತಮ್ಮತನವನ್ನು ಅದೇ ರಾಸಾಯನಿಕ ಕ್ರಿಯೆಗೆ ಧಾರೆಯೆರೆಯುವುದೋ ಎನೋ? ಹಿಟ್ಟಿನಲ್ಲಿ ಅದ್ದಿದ ಮೆಣಸಿನಕಾಯಿ ಬಿಸಿಯಾದ ಎಣ್ಣೆಯಲ್ಲಿ ಬಿದ್ದೊಡನೆ ಅದಾವ ಮಾಯೆಯಾಗುವುದೋ? ಅ ಮಾಯಾ ಸುಗಂಧವೇ ಗಾಳಿಯಲ್ಲಿ ಪಸರಿಸಿ ಜೀವಾಳವಾದ ಉಸಿರಿನೊಡನೆ ಬೆರೆತು ಮೂಗಿನ ಕಣಕಣವನ್ನು ತೋಯಿಸುತ್ತಾ ಪುಪ್ಪುಸದ ಮಾರ್ಗವಾಗಿ ರಕ್ತನಾಳಗಳಲ್ಲಿ ಹರಿಯುತ್ತಾ ಹೃದಯವನು ಮುಟ್ಟಿದೊಡೆ 'ಆಹಾ' ಎಂಬ ಉದ್ಗಾರ ಬರುವಂತಾಗುವುದು.

     ಬಹುಷಃ ಜಗತ್ತಿನ ಕೆಲವೇ ವಸ್ತುಗಳಲ್ಲಿ ಅಥವ ವಿಷಯಗಳಲ್ಲಿ ಈ ತರಹದ ಮಾಯಾ ಸೆಳೆತವಿರಿತ್ತದೇನೋ. ಆ ದಿನ ರಾಜಣ್ಣ ಹಾಕುತ್ತಿದ್ದ ಮೆಣಸಿನಕಾಯಿ ಬಜ್ಜಿಯೂ ಒಂದಿರಬಹುದು. ನೋಡುತ್ತಿದ್ದಂತೆ ಬಾಯಲ್ಲಿ ಹಾಕಬೇಕೆಂಬ ಉತ್ಕಟ ವಾಂಛೆಯಲ್ಲಿ ಒಂದೆರೆಡು ಕ್ಷಣ ಅಲ್ಲಿಯೇ ನಿಂತೆ. ಅದನ್ನು ನೋಡಿ ರಾಜಣ್ಣ ಕೇಳಿದ, "ಏನಾಯ್ತು ಸ್ವಾಮಿ. ಬನ್ನಿ ಬಿಸಿ ಬಿಸಿ ಬಜ್ಜಿ ರುಚಿ ನೋಡಿ" ಎಂದು ಕೂಗಿ ಕರೆದ. ತಕ್ಷಣ ಜ್ಞಾಪಕಕ್ಕೆ ಬಂದಿತು - ಅಂದು ನನ್ನ ಉಪವಾಸ. ಏನನ್ನೂ ತಿನ್ನುವ ಹಾಗಿಲ್ಲ. ಒಪ್ಪವಾಗಿ ಜೋಡಿಸಿದ ಮೆಣಸಿನಕಾಯಿಯು ನನ್ನನ್ನು ಅಣಕಿಸುತಲಿತ್ತು. ಆದರೆ ಆ ದಿನ ಸುವಾಸನೆಯ ಮೂಲಕ ಮನಸ್ಸಿಗಾದ ಆಹ್ಲಾದದಲಿ ನಾಲಿಗೆಯ ದುರ್ದೈವಕ್ಕೆ ದುಃಖವಾಗಲಿಲ್ಲ.

     ಮರುದಿನ ಅದೇ ಬಜ್ಜಿಯನ್ನು ತಿನ್ನಲೆಂದೇ ರಾಜಣ್ಣನ ಅಂಗಡಿಗೆ ಹೋದರೂ ಆ ಸೆಳೆತವಿರಲಿಲ್ಲ. ಬಂದ ಕಾರಣಕ್ಕಾಗಿ ಬಜ್ಜಿಯನ್ನು ಮನೆಗೆ ತೆರಳಿದರೂ ಆ ಉಲ್ಲಾಸವಾಗಲೀ ಆನಂದವಾಗಲೀ ಇರಲಿಲ್ಲ. ಕಾರಣಕ್ಕಾಗಿ ಹುಡುಕುವ ವ್ಯವಧಾನವೂ ಇರಲಿಲ್ಲ.


*********************************************************************************

     ನಾವು ಸೈನಿಕ ಶಾಲೆಯಲ್ಲಿದ್ದಾಗ ಶೈಕ್ಷಣಿಕ ಪ್ರವಾಸಕ್ಕೆಂದು ಹೈದರಾಬಾದಿಗೆ ಹೊರಟಿದ್ದೆವು. ಶಾಲೆಯಲ್ಲಿನ ದಿನಚರಿ ಹಾಗೂ ಅನುಶಾಸನದಿಂದ ಪ್ರತಿಯೊಂದು ಕ್ರಿಯೆಯೂ ಹೊತ್ತಿಗೆ ಸರಿಯಾಗಿ ನಡೆಯುತ್ತಿತ್ತು. ಎಷ್ಟೆಂದರೆ ನಮ್ಮ ಹಸಿವು ನಿದ್ಡೆಯ ಆಧಾರದ ಮೇಲೆ ನಾವು ಸಮಯವನ್ನು ಅಂದಾಜಿಸುವಷ್ಟು ನಮ್ಮ ಕ್ರಿಯೆಗಳು ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದವು. ಏರುಪೇರಾದರೆ ಮನಸ್ಸೆಲ್ಲಾ ವ್ಯಗ್ರವಾಗುವಷ್ಟು ನಾವು ದಿನಚರಿಗೆ ಒಗ್ಗಿಹೋಗಿದ್ದೆವು. ನಾವು ಶಾಲೆಯಿಂದ ಬಿಟ್ಟಾಗ 6ಗಂಟೆಯಾಗಿತ್ತು. ಬಿಜಾಪುರದಿಂದ ಸಿಂದಗಿ ಮಾರ್ಗವಾಗಿ ಕಲಬುರಗಿ ಮುಟ್ಟುವುದೆಂದು ತೀರ್ಮಾನವಾಗಿತ್ತು. 15 ವರ್ಷಗಳ ಹಿಂದೆ ಬಿಜಾಪುರದಿಂದ ಸಿಂದಗಿ ಮಾರ್ಗವೆಂದರೆ ಅಂಜಿಕೆಯಾಗುವಷ್ಟು ಕಳಪೆಯಾಗಿತ್ತು. ಬಸಿರಾಗಿದ್ದರೆ ಗರ್ಭಪಾತ ಶತಃಸಿದ್ಧ. 60 ಕಿಲೋಮೀಟರ್ ದೂರ ಕ್ರಮಿಸಲು ಎರಡೂವರೆ ಗಂಟೆಗಳು ಬೇಕಾದವು.

     ಸಿಂದಗಿಯಲ್ಲಿ ಶಾಲೆಯಿಂದ ಕಟ್ಟಿಕೊಂಡು ಬಂದಿದ್ದ ಉಪಹಾರವಾಯಿತು. ಅಲ್ಲಿಯವರೆಗೂ ವೇಳಾಪಟ್ಟಿ ಸರಿಯಾಗಿತ್ತು. ನಾವೂ ಹುಮ್ಮಸ್ಸಿನಿಂದ ಹಾಡುಗಳನ್ನು ಕೇಳುತ್ತಾ, ಹಾಡುತ್ತಾ, ಹರಟುತ್ತಾ ಸಾಗಿದ್ದೆವು. ಕಲಬುರಗಿಯಲ್ಲಿ ಖಾಜಾ ಬಂದೇನವಾಜರಿಗೆ ಪ್ರಣಾಮಿಸಿ ಮುಂದೆ ಸಾಗಿದೆವು. ಆದರೆ ರಸ್ತೆಯ ವರದಿಂದ ಕಲಬುರಗಿ ಮುಟ್ಟುವ ಹೊತ್ತಿಗಾಗಲೇ ನಮ್ಮ ಊಟದ ಸಮಯವಾಗಿತ್ತು. ನಾವು ಇದ್ದವರು 40 ಜನ. ಎಲ್ಲರೂ ಒಟ್ಟಿಗೇ ಕುಳಿತು ಊಟಮಾಡುವಷ್ಟು ಜಾಗವಿರುವ ಹೋಟೆಲ್ಗಾಗಿ ನಮ್ಮ ಹುಡುಕಾಟ ಸಾಗಿತ್ತು. ಕಲಬುರಗಿ ದಾಟಿ 60 ಕಿಲೋಮೀಟರ್ ಬಂದಾಗಿತ್ತು. ನಮ್ಮ ಹೊಟ್ಟೆಯಲ್ಲಿ ತಳಮಳ ಶುರುವಾಗಿತ್ತು. ಬೆಳೆಯುವ ವಯಸ್ಸು, ಶಿಸ್ತಿನ ಜೀವನ, ಹಸಿಯುವ ಹೊಟ್ಟೆ, ನಿರಾಶಾಜನಕ ಹೋಟೆಲ್ಲುಗಳು - ಇದರ ನಡುವೆ ಪಯಣವೂ ರೋಸಿದಂತಿತ್ತು.

     ಮುಂದೊಂದು ಧಾಬಾ, ಮತ್ತೊಂದು ಹೋಟೆಲ್ ಎನ್ನುತ್ತಾ ಸಮಯವು 3ರ ಸುಮಾರಾಗಿತ್ತು. ಬಿಟ್ಟರೆ ಕಟ್ಟಿಗೆಯ ತುಂಡನ್ನೂ ಕಡಿದು ತಿನ್ನುವಷ್ಟು ಹಸಿವು. ನಿದ್ದೆಯೂ ಬರದಷ್ಟು ಹಸಿವು. ಆದರೆ ಹೆದ್ದಾರಿ ಮಾತ್ರ ಮಧ್ಯಾಹ್ನದ ಸೂರ್ಯನಿಗೆ ಹೆದರಿ ಮಲಗಿಕೊಂಡಂತೆ ಬಿದ್ದುಕೊಂಡಿತ್ತು. ಇನ್ನೇನು ತಡೆದುಕೊಳ್ಳಲು ಸಾಧ್ಯವೇ ಇಲ್ಲವೆನ್ನುವಾಗ ಒಂದು ಧಾಬಾ ಕಾಣಿಸಿತು. ಆದರೆ ಒಮ್ಮೆಗೇ 20 ಮಂದಿ ಮಾತ್ರ ಕೂಡುವಷ್ಟು ಜಾಗವಿತ್ತು. ಇನ್ನೂ ಹುಡುಕುವ ತಾಳ್ಮೆಯಾಗಲೀ, ಮುಂದೆ ಊಟ ಸಿಗುವ ನಂಬಿಕೆಯಾಗಲೀ ಇರಲಿಲ್ಲ. ಹಾಗಾಗಿ ಅಲ್ಲೇ ಊಟ ಮಾಡುವುದೆಂದು ನಿಶ್ಚಯವಾಯಿತು. ಅರ್ಧ ಮಂದಿ ಉಣ್ಣುವ ತನಕ ಮಿಕ್ಕವರು ತಪಸ್ಸು ಮಾಡುವಂತಾಗಿದ್ದರೂ ಸರಿಯೇ. ಬೇರೆ ದಾರೆಯೇ ಇಲ್ಲ.


     ಆ ದಿನ ಆ ಧಾಬಾದಲ್ಲಿದ್ದ ಪ್ರತಿಯೊಬ್ಬ ಬಾಣಸಿಗನಲ್ಲೂ ಅನ್ನಪೂರ್ಣೇಶ್ವರಿಯ ಕೃಪಾಕಟಾಕ್ಷವಿದ್ದಂತಿತ್ತು. ಉಂಡವರಿಗೆ ಅಮೃತಪಾನ ಮಾಡಿದಷ್ಟು ಸಂತೋಷ. ಎಷ್ಟು ತಿಂದರೂ ತೃಪ್ತಿಯೇ ಇಲ್ಲದಂತೆ ತಿಂದೆವು. ಜೀವನವೇ ಮುಗಿಯಿತೆಂಬಂತೆ ತಿಂದೆವು. ಜೀವನಕ್ಕಾಗಿ, ಹೊಟ್ಟೆಯಲ್ಲಿನ ಬ್ರಹ್ಮನ ತೃಪ್ತಿಗಾಗಿ ತಿಂದೆವು. ಹೊಸದಾಗಿದ್ದ ಖಾದ್ಯಗಳೇನೂ ಇರಲಿಲ್ಲ - ಅದೇ ದಾಲ್, ರೋಟಿ, ಅಂಡಾ ಬುರ್ಜಿ, ಜೀರಾ ರೈಸ್ ಮುಂತಾದವು. ಆದರೆ ಅವು ಅಷ್ಟು ರುಚಿಕಟ್ಟಾಗಿರುವುದೆಂದು ನಾವು ಎಣಿಸಿರಲಿಲ್ಲ.

     ಆ ಒಗ್ಗರಣೆಯಲ್ಲಿನ ಜೀರಿಗೆಯ ಘಮ, ತಂದೂರಿಯಲ್ಲಿ ರೊಟ್ಟಿ ಬೇಯುವ ವಾಸನೆ, ಅನ್ನ ಬೇಯುವಾಗ ಬರುವ ನೀರಿನ ಸದ್ದು ಹಾಗೂ ವಾಸನೆ, ತಾಳವೆಂಬಂತೆ ಬಾಣಲಿಗೆ ಸೌಟಿನಿಂದ ಬಾಣಸಿಗರು ಬಡಿಯುವ ಸದ್ದು ಇವೆಲ್ಲಾವೂ ಸೇರಿ ಸ್ವರ್ಗವೇ ಅದೇನೋ ಎಂಬ ವಾತಾವರಣ ನಿರ್ಮಾಣವಾಗಿತ್ತು. ಊಟ ಮುಗಿಸಿದವರೆಲ್ಲರ ಮುಖದಲ್ಲೂ ಅದೆನೋ ಸಂತೋಷ, ಪ್ರಸನ್ನತಾ ಭಾವ ಹಾಗು ತೃಪ್ತಿ. ಈಗಲೂ ನಾನು ಹೇಳುವುದು ಅದನ್ನೇ - ನಾನಂದು ಅಮೃತಪಾನವನ್ನೇ ಮಾಡಿದ್ದು.

     ಮತ್ತೊಂದು ಸಲ ಆ ಧಾಬಾಕ್ಕೆ ಹೋಗಲು ಅವಕಾಶ ದೊರೆಯಲಿಲ್ಲ. ಹೋದರೂ ಅದೇ ತೃಪ್ತಿ ದೊರೆಯುತ್ತಿತ್ತೆಂಬ ನಂಬಿಕೆಯಾಗಲೀ ಎಣಿಕೆಯಾಗಲೀ ನನಗಿಲ್ಲ.

*********************************************************************************

     ನಾನಾಗ ಮುಂಬೈಯಲ್ಲಿ ಕೆಲಸಮಾಡುತಿದ್ದೆ. ಮೊದಲನೆಯ ನೌಕರಿಯೆಂಬ ಹುಮ್ಮಸ್ಸು, ಏನನ್ನಾದರೂ ಸಾಧಿಸಬಲ್ಲೆನೆಂಬ ಛಲ, ಯೌವನದ ಉತ್ಸಾಹ ಹಾಗೂ ವಿದ್ಯಾವಂತನಿಗಿರುವ ಆತ್ಮವಿಶ್ವಾಸ - ಎಲ್ಲವನ್ನೂ ಕಳೆದುಕೊಂಡು ಒಂದು ರೀತಿಯ ಕಳಾಹೀನ ಬದುಕನ್ನು ಸಾಗಿಸುತ್ತಲಿದ್ದೆ. ಜೀವನದಲ್ಲಿ ಒಂದು ಮಹಾ ಜಿಗುಪ್ಸೆ ಮೂಡಿ "ಸಾಕಪ್ಪಾ!! ಓಡಿ ಹೋಗೋಣ"  ಎಂದೂ ಅನಿಸುತಿತ್ತು.

     ಅಗತ್ಯಕ್ಕಿಂತಾ ಹೆಚ್ಚಿನ ಸಂಬಳವಿತ್ತು, ಜವಾಬ್ದಾರಿಯಾಗಿ ಹೆಚ್ಚಿನದೇನೂ ಇರಲಿಲ್ಲ, ಆದರೂ ಭ್ರಮನಿರಸನವಾದ ಅನುಭವ. ಮುಂಬೈ ಎಲ್ಲಾ ಸುತ್ತಾಡಿದರೂ, ಸಮುದ್ರವನ್ನೇ ದಿಟ್ಟಿಸುತಾ ಎಷ್ಟು ಹೊತ್ತು ಕುಳಿತರೂ, ಆ ಕ್ಷಣದಲಿ ನೆಮ್ಮದಿ ದೊರೆತರೂ, ಮರುಕ್ಷಣದಲಿ ಮತ್ತದೇ ದುಗುಡ ತಳಮಳ.

     ಒಂದು ಶನಿವಾರ ಸಂಜೆ ಕೆಲಸವಾದ ಮೇಲೆ ನನ್ನ ಗೆಳೆಯರಿಗೆ ಫೋನಾಯಿಸಿದೆ. ಅವರೆಲ್ಲರೂ ಮನೆಯಲ್ಲಿ ಊಟ ಮಾಡದೇ ಹೊರಗೆ ಹೋಗುತ್ತಿರುವ ವಿಷಯ ತಿಳಿದು ಆಫೀಸಿನ ಸಮೀಪವೇ ಇದ್ದ ಹೋಟೆಲ್ಲಿಗೆ ಹೋದೆ. ನಿಜ ಹೇಳಬೇಕೆಂದರೆ, ಅದು ಯಾವುದೋ ಹೋಟೆಲ್ ಅಲ್ಲ. ಆ ಹೋಟೆಲಿನಲ್ಲಿಯೇ ಸಿಹಿತಿಂಡಿಗಳ ವಿಭಾಗವಿತ್ತು. ದಿನವೂ ಆಫೀಸಿಗೆ ಹೋಗುವಾಗ ಅದರ ಮುಂದಿನಿಂದಲೇ ಓಡಾಡುತ್ತಿದ್ದೆ. ಸಕಲ ಸಿಹಿತಿಂಡಿಗಳ ಮಿಶ್ರ ಪರಿಮಳ ಮನಸ್ಸಿನಲ್ಲಿ ಸಾವಿರ ಆಸೆಗಳನ್ನು ಹುಟ್ಟು ಹಾಕುತಿತ್ತು. ಕಾಜೂ ಬರ್ಫಿ, ಬಾದಾಮ್ ಬರ್ಫಿ, ಕಾಜೂ ಕಟ್ಲಿ, ಅಂಜೂರ ಸ್ಯಾಂಡ್ವಿಚ್ ಅಲ್ಲದೇ ಹೆಸರೇ ಕೇಳಿರದಿದ್ದ ಅದೆಷ್ಟೋ ಸಿಹಿತಿಂಡಿಗಳು. ನೋಡಲು ಕಣ್ಣಿಗೂ ಹಬ್ಬ, ಮೂಗಿಗೂ ಹಬ್ಬ. ಸಾವಿರ ಹೊಟ್ಟೆಗಳಿರಬಾರದೇ ಎನ್ನುವ ದುರಾಸೆಯೂ ಇತ್ತು.

     ಮನೆಯಲ್ಲಿ ಗೆಳೆಯರಿಲ್ಲದ ನೆಪದಲ್ಲಿ ಹೋಟೆಲ್ಲಿಗೆ ಹೋದರೆ ಒಂದು ಪರಮಾಶ್ಚರ್ಯ. ಅಲ್ಲಿ ಯಾವುದೇ ಅಡಿಗೆಗೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಳಸುವುದಿಲ್ಲವೆಂದು ತಿಳಿಯಿತು. ಆದರೆ ಪಾವ್ ಭಾಜಿಯಿಂದ ಪಿಜ್ಜಾದವರೆಗೆ ಎಲ್ಲವೂ ಸಿಗುತ್ತದೆ. ಬಹುಮಹಡಿ ಕಟ್ಟಡದ ಮೇಲಿದ್ದ ಆಸೆ ಒಮ್ಮೆಲೇ ನೆಲಕ್ಕೆ ಬಡಿದಪ್ಪಳಿಸಿತು. ಈರುಳ್ಳಿ ಇಲ್ಲದ ಬಿರಿಯಾನಿ, ಬೆಳ್ಳುಳ್ಳಿಯಿಲ್ಲದ ದಾಲ್ ಫ್ರೈಯನ್ನು ಕಲ್ಪಿಸಿಕೊಳ್ಳುವುದು ಹೇಗೆ ಮಾರಾಯ? ಆದರೂ ಬಂದಿದ್ದು ಆಯಿತು, ಏನಾದರೂ ತಿನ್ನೋಣವೆಂದು ಮನಸ್ಸಿಗೆ ತೋಚಿದ ಐಟಂಗಳನ್ನು ಹೇಳಿದೆ.



     ಮೊದಲಿಗೆ ಬಂದ ಮಸಾಲಾ ಪಾಪಡ್ ಆಸೆಯನ್ನು ಚೇತರಿಸಿಕೊಳ್ಳುವಂತೆ ಮಾಡಿತು. ಅಗಲವಾದ ದುಂಡನೆಯ ಉದ್ದಿನ ಹಪ್ಪಳದ ಮೇಲೆ ಹದವಾಗಿ ಹೆಚ್ಚಿದ ಸೌತೆಕಾಯಿ, ಟೊಮ್ಯಾಟೋ ಹಾಗೂ ಹೆರೆದ ವಾಸನೆ ತೆಗೆದ ಎಲೆಕೋಸಿಗೆ ಸ್ವಲ್ಪ ಖಾರದಪುಡಿ, ಚಾಟ್ ಮಸಾಲ, ಉಪ್ಪು ಹಾಗೂ ಗರಂ ಮಸಾಲ ಎಲ್ಲವೂ ಸೇರಿ ಅಸಾಮಾನ್ಯ ರುಚಿಯನ್ನು ಕಟ್ಟಿಕೊಟ್ಟಿದ್ದವು. ನೆಚ್ಚಿನ ಈರುಳ್ಳಿಯನ್ನು ಸೌತೆಕಾಯಿ ಇಷ್ಟು ಸುಲಭವಾಗಿ ಮರೆಸಬಿಡುವುದೆಂದು ನಾನು ಎಣಿಸಿರಲಿಲ್ಲ. ಬಹುಷಃ ಏನೂ ಎಣಿಕೆಗಳಿರಲಿಲ್ಲವೆಂದೇ ಸಾಮಾನ್ಯ ಖಾದ್ಯಗಳೂ ಸಹ ಅಸಾಮಾನ್ಯಾವೆನಿಸಿದ್ದವು.

     ಸಾರ್ವಜನಿಕ ಸ್ಥಳಗಳಲ್ಲಿ ಬೆರಳು ಚೀಪುತ್ತಾ ಕೂಡುವುದು ಸಹ್ಯವಲ್ಲದಿದ್ದರೂ ಊಟವಾದಮೇಲೆ ನಾನು ಮಾಡಿದ್ದು ಅದೇ. ಅತಿಶಯೋಕ್ತಿಯೆನಿಸಿದರೂ ಅದು ನಿಜವೇ. ಮನಃಪೂರ್ತಿಯಾಗಿ ಆಹಾರದ ಸವಿಯುಂಡ ದಿನಗಳಲ್ಲಿ ಆ ದಿನವೂ ನೆನಪಿನ ಗೋಡೆಯ ಮೇಲೆ ಫ್ರೇಮ್ ಹಾಕಿಟ್ಟಿದ್ದೇನೆ.

     ಅದಾದ ಮೇಲೆ ಎಷ್ಟೋ ಬಾರಿ ಆ ಹೋಟೆಲ್ಲಿಗೆ ಹೋಗಿದ್ದಿದೆ. ಆದರೆ ಎಂದೂ ನಿರಾಶನಾಗಿ ಬಂದಿದ್ದಿಲ್ಲ. ಪ್ರತಿ ಬಾರಿಯೂ ಹೋದಾಗ ಒಂದು ಹೊಸತನ್ನು ಸವಿದು ಉಲ್ಲಸಿತನಾಗಿ ಹೊರಬರುತ್ತಿದ್ದೆ. ಬಹುಷಃ ಈರುಳ್ಳಿಯಿಲ್ಲದೇ ಅಡಿಗೆಯಿಲ್ಲವೆಂಬ ನನ್ನ ಬಲವಾದ ನಂಬಿಕೆಯನ್ನು ಅಲ್ಲಾಡಿಸಿದರಿಂದ ಆ 'ಸಾತ್ವಿಕ' ಆಹಾರವನ್ನು ಮತ್ತೆ ಮತ್ತೆ ಮೆದ್ದು ಉಲ್ಲಸಿತನಾಗುತ್ತೆದ್ದೆನೇನೋ.

*********************************************************************************

     ಈ ಹೋಟೆಲಿನ ಕಥೆಯಾಗಿ ಸುಮಾರು ಒಂದು ವರ್ಷದ ಮೇಲಾಗಿತ್ತು. ಕೆಲಸದಲ್ಲೂ ನೆಮ್ಮದಿಯಿತ್ತು. ಕಳೆದುಹೋದ ಆತ್ಮವಿಶ್ವಾಸ ಮೂಡಿ, ಜಿಗುಪ್ಸೆ ದೂರವಾಗಿ ಮತ್ತೊಮ್ಮೆ ಉತ್ಸಾಹದಲ್ಲಿ ತೇಲುತ್ತಲಿದ್ದೆ. ಜೀವನದಲ್ಲಿಯ ಬಹಳಷ್ಟು ಮಧುರ ಕ್ಷಣಗಳನ್ನು ನಾನು ಈ ಒಂದು ವರ್ಷದ ಪಯಣದಲ್ಲಿ ಕಂಡಿದ್ದೇನೆ. ವಿಶ್ವಾಸ ಮರುಕಳಿಸಿದ ಕ್ಷಣಗಳು, ಜಿಗುಪ್ಸೆ ಕರಗಿದ ಕ್ಷಣಗಳು ಅದಕ್ಕೆ ಕಾರಣವಾದ ನನ್ನ ಕಛೇರಿಯ ಗೆಳೆಯರು, ಅವರೊಂದಿಗಿನ ಒಡನಾಟದಲ್ಲಿ ಕಂಡ ಜೀವನ ದರ್ಶನ ನನ್ನಲ್ಲಿ ಹೊಸ ಮನುಷ್ಯನನ್ನು ಹುಟ್ಟು ಹಾಕಿದ್ದವು. ಜೀವನದ ನೆಮ್ಮದಿಯ ಸೆಲೆ ಕಂಡುಕೊಂಡ ದಿನಗಳವು.

     ಒಂದು ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ನನ್ನ ಜೊತೆ ವಾಸವಿದ್ದ ಗೆಳೆಯ ಕಾಫಿ ಕುಡಿಯಲು ಹೋಗೋಣವೆಂದು ಒತ್ತಾಯಿಸಿದ. ಗಂಟೆ 9 ಆಗಿದೆ, ಈಗೆತ್ತಲಿನ ಕಾಫಿಯೆಂದರೂ ಕೇಳದೆ ಪಕ್ಕದಲ್ಲೇ ಕೆಫೆ ಕಾಫಿ ಡೇಗೆ ಕರೆದೊಯ್ದು ಕಾಫಿಯನ್ನು ಕುಡಿದೆವು. ಊಟವನ್ನು ಮೊದಲೇ ಮಾಡಿದ್ದೆವು. ಹೊಟ್ಟೆ ಆಗಲೇ ಬಿರಿದುಕೊಳ್ಳುತ್ತಿತ್ತು ಆದರೂ ಈ ಮಹಾಶಯನಿಗೆ ಮತ್ತಷ್ಟು ತಿನ್ನಬೇಕೆಂಬ ಚಪಲ.

     ಏನು ತಿನ್ನೋಣವೆಂದು ಕೇಳಿದರೆ ಅವನು ಹೇಳಿದ "ಸಿಜ್ಲಿಂಗ್ ಬ್ರೌನಿ". ಅಂದಿನವರೆಗೂ ನಾನದನ್ನು ತಿಂದಿರಲಿಲ್ಲ. ಅದರ ಹೆಸರೂ ಕೇಳಿರಲಿಲ್ಲ. ಅದೂ ಆಗಲಿ ಎಂದು ಆರ್ಡರ್ ಮಾಡಿದೆವು. ಆ ಖಾದ್ಯ ಎದುರಿಗೆ ಬಂದಾಗ ಅತ್ಯಾಶ್ಚರ್ಯ. ಹೀಗೂ ತಿನಿಸುಗಳಿರಬಹುದೆಂದು ಊಹಿಸಿಯೂ ಇರಲಿಲ್ಲ.


     ಬಿಸಿಯಾದ ಕಬ್ಬಿಣದ ತಟ್ಟೆಗೆ ಸುತ್ತಲೂ ಮರದ ಚೌಕಟ್ಟು. ಆ ತಟ್ಟೆಗೆ ಮರದ ಹಿಡಿಕೆಯೂ ಇತ್ತು. ಆ ತಟ್ಟೆಯಲ್ಲಿ ಬೆಚ್ಚಗಿರುವ ಚಾಕೋಲೇಟ್ ಹಾಗೂ ಅಖರೋಟಿನಿಂದ ಮಾಡಿದ ಕೇಕ್ (ಬ್ರೌನಿ). ಆ ಕೇಕಿನ ಮೇಲೆ ಅತಿ ತಣ್ಣಗಿರುವ ವೆನಿಲ್ಲಾ ಐಸ್ ಕ್ರೀಂ. ಅದರ ಮೇಲೆ ಕುದಿಯುತ್ತಿರುವ ಚಾಕೋಲೇಟ್ ಸಾಸ್. ವೆನಿಲ್ಲಾ ಐಸ್ ಕ್ರೀಂನ ಲಘು ಸ್ವಾದ, ಚಾಕೋಲೇಟಿನ ಭರ್ಜರಿ ಫ್ಲೇವರ್, ಬಿಸಿ ತಾಕಿದ ಕಬ್ಬಿಣದ ವಾಸನೆ ಹಾಗೂ ಅದರಲ್ಲಿ ಸಾವಕಾಶವಾಗಿ ಕರಗುವ ಕೇಕ್ - ವಾಹ್!!! ಬೆಚ್ಚಗಿರುವ ಬ್ರೌನಿ, ತಣ್ಣಗಿರುವ ಐಸ್ ಕ್ರೀಂ ಮೇಲೆ ಕುದಿಯುತ್ತಿರುವ ಚಾಕೋಲೇಟ್ ಸಾಸ್ - ಇವೆಲ್ಲವೂ ಒಟ್ಟಿಗೆ ಬಾಯಲ್ಲಿ ಇಟ್ಟಾಗ  ಒಮ್ಮೆಲೇ ಎಲ್ಲವೂ ಕರಗಿದಂತಾಗುವುದು. ಅಲ್ಲಲ್ಲಿ ನಾಲಿಗೆ ಸುಟ್ಟರೇ ಮರುಕ್ಷಣವೇ ಐಸ್ ಕ್ರೀಂನ ತಂಪು ಅದನ್ನು ಶಮನಗೊಳಿಸುವುದು. ನಡುವೆ ಸಿಗುವ ಅಖರೋಟಿನ ಸ್ವಾದ, ಕೇಕಿನ ಮೆದು ಎಲ್ಲವೂ ಸೇರಿ ಸ್ವರ್ಗದ ಮೇಲೆ ಮೂರಂತಸ್ತಿನ ಅರಮನೆ ಕಟ್ಟಿ ನಮ್ಮನ್ನು ಅಲ್ಲಿಗೇ ತಲುಪಿಸುವವು.

     ಹೊಟ್ಟೆ ಪೂರ್ತಿ ತುಂಬಿದ ಮೇಲೂ ಮತ್ತೆ ತಿನ್ನಬೇಕು ಎಂದೆನಿಸಿ, ತಿಂದರೂ ಅಸಹ್ಯವೆನಿಸದೇ ಮಹದಾನಂದ ಕೊಡುವ ಏಕೈಕ ಪದಾರ್ಥವೆಂದರೆ ಬಹುಷಃ ಚಾಕೋಲೇಟೇ ಇರಬೇಕು. ಬೇರಾವ ಖಾದ್ಯಕ್ಕೂ ಆ ಸಾಮರ್ಥ್ಯವೇ ಇಲ್ಲ.


*********************************************************************************

     ನಮ್ಮ ಪೂರ್ವಿಕರು ಆಹಾರವನ್ನು ಬ್ರಹ್ಮನತ್ತ ಹೋಗುವ ಹಾದಿಗೆ ಹೋಲಿಸಿದ್ದರು. ಕೆಲವು ಕಡೆ ಬ್ರಹ್ಮನ ಸ್ವರೂಪವೇ ಎಂದೂ ಕರೆದರು. ದೇಹಕ್ಕೆ ಭೌತಿಕವಾಗಿ ದೇಹದೊಳಗಿನ ಆತ್ಮಕ್ಕೆ ಆಧ್ಯಾತ್ಮಿಕವಾಗಿ ಪೋಷಿಸುವುದು ಇದೇ ಆಹಾರ. ಆಹಾರದ ಪರಮಗುರಿಯೆಂದರೆ ಆನಂದ. ಹೊಟ್ಟೆ ಹಸಿದಾಗ ಊಟ ಮಾಡಿದರೆ ಭೌತಿಕವಾಗಿ ಹೊಟ್ಟೆ ತುಂಬುವುದು ಗೋಚರವಾದರೂ ನಮ್ಮ ಮನಸ್ಸಿಗೆ ಆಗುವ ತೃಪ್ತಿಯೇ ಆಹಾರದ ಲಕ್ಷ್ಯವಾಗಿರಬೇಕು. ಅಡಿಗೆ ಮನಸ್ಸು ತುಂಬಬೇಕು ಹೊಟ್ಟೆಯನ್ನಲ್ಲವೆಂದು ಎಲ್ಲೋ ಕೇಳಿದ ನೆನಪು. ನಾನು ಈ ಮೊದಲೇ ಹೇಳಿದ ದೃಷ್ಟಾಂತಗಳು ಹಲವು ವರ್ಷಗಳಷ್ಟು ಹಳೆಯದಾದರೂ ಮನಸ್ಸಿನಲ್ಲಿ ಅಚ್ಚಳಿಯದೇ ಇರುವುದು ಆ ಕಾರಣದಿಂದಲೇ.

     ದೇಹಕ್ಕೆ ಶಕ್ತಿಯ ಸಿಂಚನವಾಗುವುದು ಆಹಾರದಿಂದಲೇ. ಹಾಗೂ ಶಕ್ತಿ ಸಂಚಯವಾಗುವ ಕಾರ್ಯಗಳ ಮೇಲೆ ನಾವು ತಿನ್ನುವ ಆಹಾರ ಪರಿಣಾಮ ಬೀರುತ್ತದೆ. ದೇಹದ ನಿರಂತರ ಚಲನೆಗೆ, ಚಾಲನೆಗೆ ಹಾಗೂ ಮನಸ್ಸಿನ ಚಿತ್ತಸ್ಥೈರ್ಯಕ್ಕೂ ಇದೇ ಆಹಾರ ಸಾಧನವಾಗುತ್ತದೆ. ಅದೇ ಆಹಾರದ ಗುಣದಿಂದ ಮನಸ್ಥಿತಿಯೂ ನಿರ್ಧಾರವಾಗುತ್ತದೆ. ಅತಿಯಾದ ಖಾರವಾದ ಆಹಾರ ವ್ಯಗ್ರತೆಯನ್ನು ಹೆಚ್ಚಿಸಿದರೆ, ಅತಿಯಾದ ಸಿಹಿ ತಳಮಳ ಹುಟ್ಟು ಹಾಕುತ್ತದೆ.

     ಆದರೆ ದಿನನಿತ್ಯದಲ್ಲಿ ಆಹಾರಕ್ಕೆ ನಾವು ಕೊಡುವ ಮಹತ್ವ ಬಹಳ ಕಡಿಮೆ. ಹೊಟ್ಟೆ ತುಂಬಿದರೆ ಸಾಕು ಎಂದು ಏನನ್ನಾದರೂ, ಯಾವ ಹೊತ್ತಿನಲ್ಲಾದರೂ ಬಾಯಿಗೆ ಹಾಕುತ್ತೆಲೇ ಇರುತ್ತೇವೆ. ಆಹಾರದ ವಿಷಯದಲ್ಲಿ ಶಿಸ್ತಿರಬೇಕೆಂಬ ಕನಿಷ್ಠ ಜ್ಞಾನವನ್ನೂ ಮರೆತಿದ್ದೇವೆ. ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಬಾಯಿಯ ಕೆಲಸ ಶುರುವಾಯಿತೆಂದರೆ ಮಲಗುವವರೆಗೂ ನಡೆಯುತ್ತಲೇ ಇರುತ್ತದೆ. ಬಹುಷಃ ಅದರಿಂದಲೇ ಮಧುಮೇಹ, ಸ್ಥೂಲಕಾಯ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು 30 ವರ್ಷದೊಳಗಿನವರಿಗೂ ಕಾಡುತ್ತಿರುವುದು. ಆಹಾರದ ಶಿಸ್ತನ್ನ ಪಾಲಿಸಿಕೊಂಡು ಬಂದ ಅಜ್ಜಿ-ತಾತಂದಿರು ಮಾತ್ರ ಗಟ್ಟಿಮುಟ್ಟಾಗಿರುವುದು.

     ಯಾವಾಗ ಹೊಟ್ಟೆಯ ಬದಲು ನಾಲಿಗೆಯು ಆಹಾರದ ಬೇಕು-ಬೇಡಗಳನ್ನು ನಿರ್ಧರಿಸುವುದೋ, ಅಲ್ಲಿಗೆ ನಮ್ಮಯ ಆರೋಗ್ಯದ ಅವನತಿ ಶುರುವಾಯಿತೆಂದೇ ತಿಳಿಯಬೇಕು. ನಾಲಿಗೆಯು ಇಂದಿನದಲ್ಲದೇ ನಾಳೆಯದೂ ಚಿಂತೆ ಮಾಡುತ್ತದೆ. ಆಸೆಯ ಬಲೆಯ ನೇಯ್ದು ಮನಸ್ಸನ್ನು ಬಂಧಿಸಿಡುತ್ತದೆ. ಅಂತಲೇ ಉಪವಾಸದ ನಿಯಮಗಳನ್ನು ಸಮಾಜದ ಹಾಗೂ ವ್ಯಕ್ತಿಯ ಆರೋಗ್ಯದ ದೃಷ್ಟಿಯಿಂದ ಮಾಡಿದ್ದಿರಬೇಕು. ಉಪವಾಸದ ದಿನ ನಮ್ಮಯ ಇಂದ್ರಿಯಗಳೆಲ್ಲವೂ ಚುರುಕಾಗಿರುವುದನ್ನು ನಾನೂ ಗಮನಿಸಿದ್ದೇನೆ. ಆಹಾರದ ನಿಜವಾದ ಮೌಲ್ಯ ತಿಳಿಯುವುದು ಉಪವಾಸದ ದಿನದಂದು. ಹಾಗಾಗಿ ಧಾರ್ಮಿಕ ಕಾರಣಗಳನ್ನು ಒಡ್ಡಿ ಉಪವಾಸದ ಸಮಾಪ್ತಿಗೆ ಅನ್ನದಾನದ ಲೇಪವಿಟ್ಟಿರಬಹುದು.

     ದಿನದಿನವೂ ಹೊಸತಿರಬೇಕೆಂದು ತುಡಿಯುವ ಇಂದಿನವರಿಗೆ ಉಪವಾಸದ ವ್ಯಾಖ್ಯಾನ ಸರಿ ಹೊಂದಲಿಕ್ಕಿಲ್ಲ. ಕೆಲವೇ ದಿನಗಳ ಜೀವನವನ್ನು ಅತಿ ಅಶಿಸ್ತಿನ ಪರಿಧಿಯೊಳಗೆ ಕಳೆದು ಅದನ್ನೇ 'ಎಂಜಾಯ್ಮೆಂಟ್' ಎನ್ನುವ ಈಗಿನ ಮಂದಿಗೆ ಊಟ ಚೆಲ್ಲುವುದೂ ಒಂದು ಪ್ರತಿಷ್ಠೆಯ ವಿಷಯವಾಗಿದೆ. ಆಹಾರವನ್ನು ಚೆಲ್ಲುವವರು ಹೆಚ್ಚಿದಂತೆಲ್ಲಾ ಊಟಕ್ಕಾಗಿ ಪರದಾಡುವ ಮಂದಿಯೂ ಹೆಚ್ಚಾಗುತ್ತಿದ್ದಾರೆ. ಸರ್ಕಾರ ಎಷ್ಟೇ 'ಭಾಗ್ಯ'ಗಳನ್ನು ತಂದರೂ ಆಹಾರದ ಕೊರತೆಯನ್ನು ನೀಗಿಸಲು ಶಿಸ್ತಿಲ್ಲದೇ ಆಗುವುದಿಲ್ಲ. ಎಷ್ಟೋ ಜ್ಞಾನಿಗಳೇ ಆಹಾರದ ಬಗ್ಗೆ ತಾತ್ಸಾರ ತೋರುವಾಗ ಅಜ್ಞಾನಿಗಳನ್ನು ಕೇಳುವ ಹಾಗೆಯೇ ಇಲ್ಲ. ಆಹಾರದ ಕೊರತೆ ನೀಗುವವರೆಗೂ ಎರಡು ತರಹದ ಆಹಾರಾನ್ವೇಷಣೆಗಳು ನಡೆಯುತ್ತಲೇ ಇರುತ್ತವೆ - ಒಂದು ನನ್ನಂತಹ ಉಳ್ಳವನ ಆನಂದದ ಆಹಾರಾನ್ವೇಷಣೆ, ಮತ್ತೊಂದು ಇಲ್ಲದಿರುವವನ ಹೊಟ್ಟೆಪಾಡಿನ ಆಹಾರಾನ್ವೇಷಣೆ.

Thursday, March 13, 2014

ಬೆಳಕಿನ ಕತ್ತಲೆ

ಹನಿಗಳ ಚಿಟ ಪಟ ಸದ್ದಿಲ್ಲ, ಆದರೂ ಭೋರ್ಗರೆತ,
ಭೂಮಿ-ಮಳೆಯ ಮಿಲನದ ವಾಸನೆಯಿಲ್ಲ, ಆದರೂ ಸಲ್ಲಾಪ,
ಬಿಸಿಲಿನ ಕೆಂಧೂಳಿಯಲ್ಲಿಯ ಕಾಮನಬಿಲ್ಲಿಲ್ಲ, ಆದರೂ ಸಮ್ಮಿಳಿತ,
ಆಲಿಂಗನವೋ, ಆಪೋಷಣವೋ, ಸುಮಧುರ ಅನುಭವವೋ,
ಅದರೊಳು ನಾವೋ, ನಮ್ಮೊಳು ಅದೋ,
ಆತ್ಮಮಿಲನ, ಅಧಃಪತನ, ಅಂಧಕಾರ ವರ್ಷದ ಮೌನರಾಗದಲಿ,
ಜಗಕೆಲ್ಲಾ ಜೋಗುಳ, ನಿತ್ಯ ಸಿಂಚನ, ನಿತ್ಯ ರೋದನ.

ಕಾಲಗರ್ಭದ ಚೊಚ್ಚಲ ಕೂಸಿದು ಕತ್ತಲೆ,
ಬೆಳಕು ಮೊದಲಿರಲು ಕತ್ತಲೆಯ ಜನನವೆಲ್ಲಿ?
ದೀಪವು ಆರುವುದೆಂದು ತಿಳಿದರೂ ಹಚ್ಚುವುದು ಆಶಾವಾದವೇ?
ಅಥವಾ ಕತ್ತಲೆಯೇ ಕೊನೆಯೆಂದು ತಿಳಿಯುವುದು ನಿರಾಶಾವಾದವೇ?
ಅದೆಲ್ಲಾ ಬರಿಯ ಭ್ರಾಂತಿ,
ಕತ್ತೆಲಿಯಿಂದ ಬೆಳಕು, ಬೆಳಕಿನಿಂದ ಕತ್ತಲೆ,
ಇದೇ ಕಾಲಚಕ್ರ, ಸೃಷ್ಟಿಚಕ್ರ, ಜೀವನಚಕ್ರ.

ಬೆಳಕು ಅರಿವಾದರೆ ಕತ್ತಲೆಯೇನು? ಅರಿವಿನಾಚೆಯ ಇರುವೇ?
ಅದು ದಿಟ, ಅಗಾಧ, ಅರಿವು ತೊರೆಯೊಂದೇ, ಅದರಾಚೆಯೇ ಸಾಗರ,
ಸಿರಿತನದ ಸಿಗ್ಗಿಲ್ಲ, ಭವ್ಯತೆಯ ಮೆರುಗಿಲ್ಲ, ಅಂಜಿಕೆಯ ಅಲೆಯೊಂದೆ ಅಲ್ಲಿ,
ಭ್ರೂಣದೊಳಿದ್ದು ಭ್ರೂಣವನ್ನೇ ಕಿತ್ತೊಗೆಯಲು ಸಾಧ್ಯವೇ?
ಪರಿಹಾರವೊಂದೆ, ದಾರಿಯೂ ಒಂದೇ, ಭ್ರೂಣದಿಂದ ಜನನ,
ಅದೇ ಬೆಳಕು, ಕಿಡಿಯಷ್ಟೇ ಬೆಳಕು, ಜೀವನಕಷ್ಟು ಸಾಕು.

ತಾ ಸೃಷ್ಟಿಸಿದ ಅಂಡದಿಂದ ಹೊರಬಂದರೆ ಬೆಳಕು,
ನವೀನತೆಯ ಜನನವೇ ಅದು, ಮರುಜನ್ಮವೇ ಅದು,
ಜ್ಞಾನ ಸೃಷ್ಟಿಯದು, ಸಣ್ಣದಾದ ಭರ್ಜರಿ ಜಯವದು,
ಅಂಧಕಾರವನು ಪ್ರಕಾಶಿಸಿದ ವಿಜ್ಞಾನವದು,
ಕಥೆಯಾಯಿತು, ಶಾಸ್ತ್ರವಾಯಿತು, ಪರಂಪರೆಯಾಯಿತು,
ಕಿಲುಬುಗೊಂಡಿತು, ಮತ್ತೆ ಆರಿಹೊಯಿತು.

ಸೃಷ್ಟಿ ಚಕ್ರವಲ್ಲವೇ? ಮತ್ತೆ ಜನಿಸುವುದು,
ಬೇರೊಂದು ರೀತಿಯಲಿ, ಬೇರೊಂದು ಕಾಲಮಾನದಲಿ,
ಹುಟ್ಟು ಸಾವಿನ ಚಕ್ರಕೆ ಜ್ಞಾನವೂ ಹೊರತಲ್ಲ,
ಕರ್ಮಬಂಧನದಿಂದ ಜ್ಞಾನಕೂ ಮುಕ್ತಿಯಿಲ್ಲ.

ಜನರಿಂದ ಜನಕೆ, ಪಂಗಡದಿಂದ ಪಂಗಡಕೆ, ದೇಶದಿಂದ ದೇಶಕೆ,
ಜ್ಞಾನದ ಕಿಡಿಯು ಹರಡುವುದು, ಹಿರಿದಾಗುವುದು,
ಎಲ್ಲರೂ ಕಿಡಿಯ ಮಾಲೀಕರೆ, ಎಲ್ಲರೂ ವಾರಸುದಾರರೆ,
ಜಾಣರೆಲ್ಲಾ ಕಿಡಿಗಳ ಸೇರಿಸಿ ಮಶಾಲು ಹೊತ್ತಿಸುವರು,
ಬೆಳಕು ಝಗ-ಮಗ, ಕೆಲವರಿಗಷ್ಟೇ ಸೀಮಿತ,
ಮೇಲಕ್ಕೇರಿಸಿ, ಇನ್ನಷ್ಟು ಜನರಿಗೆ ಸೇರಲಿ ಬೆಳಕು,
ಮಗದಷ್ಟು ಮಂದಿಯು ಹೊರಗುಳಿದರು, ಮತ್ತೂ ಮೇಲಕ್ಕೆ ಮಶಾಲು,
ಗಾಳಿಯಲಿ ಅಲುಗಾಡಿದೆ, ದೂರ ಹೋಗಿದೆ, ಸಣ್ಣ ಬೆಳಕೊಂದೇ ಎಲ್ಲರಲ್ಲಿದೆ,
ಬೆಳಕಿನ ಹುರುಪಿನಲಿ, ಧೈರ್ಯದ ಭರವಸೆಯಲಿ, ಮರೆತೇ ಬಿಡುವರು,
ಮೇಲೆ ಹೋದ ಬೆಳಕು, ತನ್ನ ಕೆಳಗೆ ಕತ್ತಲನೇ ಬಿಡುವುದೆಂದು.

ಅದೇ ಬೆಳಕಿನ ಕತ್ತಲೆ, ಆಶಾವಾದದ ನಿರಾಶೆಯೋ, ನಿರಾಶಾವಾದದ ಆಶೆಯೋ,
ಇರುವಿನ ಬೆಚ್ಚನೆಯ ಅನುಭವವೂ ಇದೆ,
ಕೈಗೆಟುಕದ ಭ್ರಮನಿರಸನವೂ ಇದೆ,
ಅಂಧಕಾರವನು ತೊಲಗಿಸುವ ಯತ್ನವೂ ಇದೆ,
ಆದರೆ ಅಸಾಧ್ಯವದು!!!! ಎಷ್ಟೇ ಬೆಳಕಿರಲಿ,
ದೀಪದ ಬುಡದ ಕತ್ತಲೆಯೇ ದಟ್ಟವಾದುದಲ್ಲವೇ?

Monday, February 24, 2014

ಆ ಭೇಟಿ

ಗುಟ್ಟುಗಳ ಭ್ರೂಣದಲಿ ಜನಿತನಾದವನೋ,
ನೀ ರಹಸ್ಯನೋ, ನಕ್ಷತ್ರಕ ನಾಯಕನೋ,
ಕೊರಗಿನ ಕಪ್ಪಿನಲಿ ಮಿಂದೆದ್ದ ರಕ್ಕಸನೋ,
ಜಗ ಜರೆದ ಭಾಗ್ಯದಲಿ ರಹಸ್ಯನಾದವನೋ.

ಜನುಮದಾತನಿಗೂ ಬೇಡದ ಅನಾಥನಾಗಿ,
ಪಾಪಪ್ರಜ್ಞೆಯ ಛಾಯೆಯಲಿ ಬಲಿಷ್ಠನಾಗಿ,
ಅಂತರಾಳದ ಗ್ರಹಣವೇ ನೀನಾಗಿ, ಗಹಗಹಿಸಿದಂತೆ,
ಕರಾಳತೆಯ ಒಂದು ಮುಖ ನಿನ್ನದು, ಪ್ರತಿಬಿಂಬದಂತೆ.

ಎಲ್ಲ ಮನಸಲೂ ಅವಿತಿರುವ ಚೋರ,
ಎಲ್ಲ ಮನಸುಗಳನೂ ಆವರಿಸಿರುವ ಪೋರ,
ಸಮಯ ಸಾಧಕನಾಗಿ ಕುಳಿತಿರುವ ಕ್ರೂರ,
ನಿನ್ನ ಭೇಟಿಯು ಬೇಡ, ನೀನಿರು ದೂರ.

ಆ ನಿನ್ನ ಭೇಟಿಯನು ತಡೆಯುವೆವು, ಮುಂದೂಡುವೆವು,
ಆರ್ತವಾಗಿ ಮೊರೆ ಹೋಗುವೆವು, ದೇವರಿಗೋ ಮಾಯೆಗೋ,
ಆದರೆ ನೀ ಹುಣ್ಣಿನಂತೆ, ನೆತ್ತರಿಲ್ಲ ಬರಿಯ ಕೀವು,
ಜಗಕೆ ಕಾಣುವುದಿಲ್ಲ ಮನದ ಅಸಾಧ್ಯ ನೋವು.

ನಿಜ, ಆ ಭೇಟಿಯಾಗಲೇ ಬೇಕು,
ನೀನು ನಾನು ಮುಖಾಮುಖಿಯಾಗಲೇ ಬೇಕು,
ಧೈರ್ಯದ ಹೊನಲಿನಲಿ, ಕ್ಷಮೆಯ ಶರಧಿಯಲಿ,
ನನ್ನ ಕರಾಳ ಪ್ರತಿಬಿಂಬವ ತೊಳೆಯಲೇಬೇಕು.

ಮರೆತೆ ನಾನು, ಆ ಭೇಟಿಯು ಕೊಡಲಿಯೆಂದು,
ಮನಡೊಳು ಹಬ್ಬಿದ ಕೊರಗು ಬಳ್ಳಿಯ ಮೃತ್ಯುವೆಂದು,
ನಿನ್ನ ದಶಾನನ ರಾಜ್ಯದ ಮುಕ್ತಿಯೊಳಿಂದು,
ನಿನ್ನಾಟದ ಪರದೆಯ ಎಳೆದೆನು - ಹೊಸ ಗುಟ್ಟಿಗಾಗಿ,
ಹೊಸತೊಂದು ರಹಸ್ಯವಾಗಿ, ನೀ ಮತ್ತೆ ಹುಟ್ಟಲೆಂದು.

Monday, September 2, 2013

ಬ್ರಹ್ಮ-ವಿಷ್ಣು-ಶಿವ

ಸೃಷ್ಟಿಯ ವೃತ್ತದಲಿ ಸೃಷ್ಟಿಯೇ ಅಂತ್ಯವು,
ನಡುವಿನ ಲಯದಲೇ ಸೃಷ್ಟಿಯ ಸ್ಫೂರ್ತಿಯು,
ಬ್ರಹ್ಮನಾಗಿ ಸೃಷ್ಟಿಸಿದೆ, ಲಯಕಾಗಿ ಶಿವನಾದೆ,
ಸೃಷ್ಟಿ-ಲಯದ ಸಾರ್ಥಕತೆಗಾಗಿ ವಿಷ್ಣುವಾದೆ.

ಜ್ಞಾನದ ಸೊಡರು ಹಿಡಿದು ಜ್ಞಾನಬೀಜವ ಬಿತ್ತಿ,
ವಿಜ್ಞಾನವ ಬೆಳೆದು ಮೂಡಿಸಿದೆ ಭವಿಷ್ಯದ ಭಿತ್ತಿ.
ಐಲೈಲು ಮನಸುಗಳಿಗೆ ಮಾಯೆಯ ಸುತ್ತಿ,
ಬ್ರಹ್ಮನಾಗಿ ಸೃಷಿಸಿದೆ ಮಾನವನಿಗೊಂದು ಮಿತಿ.

ಲಯದ ಭೀಕರತೆಗೆ ಮಾನವನು ಅದುರಿದನು,
ಭಯದ ಬಿಂಬದಲಿ ಭಕುತಿಯನು ಕಂಡಿಹನು,
ತನ್ನ ಧ್ಯಾನದಲಿ ಮಗ್ನನಾಗಿ ಶಿವನು ಕುಳಿತಿಹನು,
ಮಾನಸ ಸರೋವರದ ತಟದಿ ಕೈಲಾಸವ ಕಟ್ಟಿಹನು.

ಸ್ಥಿತಿಯ ಶಾಂತತೆಯಲಿ ವೈಕುಂಠದ ಗುಟ್ಟಡಗಿಸಿ,
ಬಾಳಿನುದ್ದಕೂ ಹಣರೂಪಿ ಲಕುಮಿಯನೇ ಅರಸಿ,
ವಿಷ್ಣುವಾಗಿ ಮಲಗಿಹೆ ನಿನಗೆ ಲಕುಮಿಯೇ ಅರಸಿ,
ಕ್ಷೀರ ಸಾಗರಕೆ ಬರಬೇಕು ನಾವು ನಿನ್ನನರಸಿ.

ಕಾಣದ ಕ್ರಿಮಿಯಾಗಿ ಹುಟ್ಟಿ ಮಾನವನಾದರೂ,
ಜ್ಞಾನದ ಮೆಟ್ಟಿಲುಗಳನು ಏರುತಾ ಹೋದರೂ,
ಅರ್ಥೈಸಲಾಗದ ಒಗಟುಗಳಿನ್ನೂ ಇರಲು,
ಭಾರ ದಾಟಿಸಲು ಬೇಕು ಭಗವಂತನ ಹೆಗಲು.

ಭಯವು ದಾಟಿದ ಭಕ್ತಿಯಲಿ ಆನಂದವು ತುಳುಕಿಹುದು,
ಜಂಜಡವಾದ ಬದುಕಿನಲಿ ಸಮಾಧಾನವ ತಂದಿಹುದು,
ಸಂಪೂರ್ಣ ಸಮರ್ಪಣೆಯಲಿ ಮದವು ಇಳಿದಿಹುದು,
ನಿಶ್ಕಲ್ಮಶ ಮನಸು ಪ್ರೀತಿಯನು ಹರಡಿಹುದು.

ಜ್ಞಾನದ ಬಾಗಿಲುಗಳನು ತೆಗೆಯುತಾ ಮನವು,
ವಿಚಿತ್ರ ಅನ್ವೇಷಣೆಗಳನು ಸೃಷ್ಟಿಸಿದೆ ಮನವು,
ಸೃಷ್ಟಿಯ ಚಕ್ರದ ಆದಿಯನು ಹಾಡಿದೆ,
ಬ್ರಹ್ಮನಾಗಿ ಸೃಷ್ಟಿಸಿದೆ, ಲಯಕಾಗಿ ಶಿವನಾದೆ.

ಮಾನಸ ಸರೋವರದ ತಟದಲಿ ಶಿವನಾಗಿ ನೆಲೆಸಿದೆ,
ನಿಶ್ಕಲ್ಮಶ ಕ್ಷೀರಸಾಗರದಲಿ ವಿಷ್ಣುವಾಗಿ ನೆಲೆಸಿದೆ,
ಮಾನವ ದೇಹದ ಉತ್ತುಂಗದಲಿ ಮನಸಾದೆ,
ಅಪೂರ್ಣ ಒಗಟುಗಳಿನ್ನೂ ಇರಲು ಬಹ್ಮ-ವಿಷ್ಣು-ಶಿವನಾದೆ.

Thursday, February 7, 2013

ಸೂತಕ


ಕರಿಮಾರಿಯೊಂದು ನೋಡುತಲಿ ಇಣುಕಿ ಇಣುಕಿ,
ಪ್ರೀತಿಯ ಅಪ್ಪುಗೆಯೊಳಿಟ್ಟು ಪಾಶದ ಬೆಂಕಿ,
ಪ್ರೀತಿಸುವಳು, ಬರ ಸೆಳೆವಳು, ಮೈಮರೆಸುವಳು,
ಪರರ ಮೃತ್ಯುವಿನ ಭೋಜನದಲಿ ತಾ ಬದುಕಿಹಳು.


ಅವಳ ಹಾಡು - ಇಂಪಲ್ಲ, ಘೋರ,
ಅವಳ ನರ್ತನವು ತಾಂಡವ ಪ್ರಕಾರ,
ಹೃದಯಗಳಲಿ ಕಂದಕಗಳನು ಕೊರೆದು,
ಮನೆ ಮುಂದೆ ಹೊಗೆಯಿಟ್ಟು, ಮನವ ಮಾಡಿ ಬರಿದು.


ಅಗಲಿಕೆಯ ಆಕ್ರಂದನ, ಕ್ರೂರ ನಿಶ್ಶಬ್ದ,
ಕಡೆ ತನಕ ದುಃಖದ ಪಸೆಯ ಪ್ರಾರಬ್ಧ,
ಅವಳು ಬಾರದೆ ಇರುವ ಮನೆಯಿಲ್ಲ,
ಅವಳಿರದೆ ಸೃಷ್ಟಿಯ ಸ್ಫೂರ್ತಿಯಿಲ್ಲ.


ಹಠಾತ್ತನೆ ತನ್ನವರ ಕಳೆದುಕೊಂಡಿರುವ ದುಃಖ,
ಜಗವು ಹೇಳುವುದು ಕಲಿ ಇಷ್ಟು ದಿನದ ಸೂತಕ,
ಮೈಲಿಗೆಯಾಗಿರುವೆ ನೀನು, ದೇವರ ನೆನೆಯಬೇಡ!
ನನ್ನನು ಯೋಚಿಸದೆ ನಾನು ಹೇಗಿರಬೇಡ?


ಯಾವ ಕಾರಣಕೆ ಮಾಡಿದರೋ ಸೂತಕ-ವೃದ್ಧಿಯ ಪ್ರಥೆ?
ಹುಟ್ಟಿದರೂ ಮೈಲಿಗೆ, ಸತ್ತರೂ ಮೈಲಿಗೆ - ಇದೇನು ಕತೆ?
ಪರಂಪರೆಯ ಹೆಸರಿನಲಿ ಮೂಧನಂಬಿಕೆಯ ಅಮಲು,
ಪ್ರಶ್ನಿಸಿದರೆ ಉತ್ತರವಿಲ್ಲ - ಹೆಸರಿಡುವರು ಉದ್ಧಟತನದ ತೆವಲು.


ಮಾತಿನಲೇ ಮೇರುಗಿರಿಯ ಮೆಟ್ಟಿಸುವರು ಮಂದಿ,
ಮನುಷ್ಯತ್ವವ ಕೊಂದು ತರುವರು ಬೇಗುದಿ,
ಅದು ನಿತ್ಯ ಸೂತಕ, ಅದು ಕಡೆ ತನಕ,
ದಿನವೂ ಅಳುವವರಿಗೆ ಕೇಳುವರೇ ಜಾತಕ?





Friday, December 14, 2012

ತುಂಬಿದ ಕೊಡ


ಮೊಗದಂದ ಹೆಚ್ಚಿಸುವ ಕಾಡಿಗೆಯಂತೆ,
ವಕ್ರ ದೃಷ್ಟಿ ಇಳಿಸುವ ಬೊಟ್ಟಂತೆ,
ನಯನಕಾದರೆ ಸೊಗಸು, ಗಲ್ಲಕಾದರೆ ಸೊಗಸು,
ಎಲ್ಲ ಕಡೆ ಇಟ್ಟೇನೆಂದರೆ ಹೊಲಸು.


ತುಸು ಕಲ್ಲು, ತುಸು ಸಿಹಿ, ಕಲ್ಲು ಸಕ್ಕರೆಯಂತೆ,
ಬಾಯೊಳಿಟ್ಟರೆ ತಾನಾಗೇ ಕರಗುವುದಂತೆ,
ಕೈಯೊಳು ಬಚ್ಚಿಟ್ಟರೆ ಬರಿಯ ಜಿಡ್ಡಂತೆ,
ಇಟ್ಟಲ್ಲೇ ಮರೆತರೆ ಇರುವೆಗಳ ಪಾಲಂತೆ.


ವಿಶಾಲವಾಗಿ ಪ್ರವಹಿಸುವ ನದಿಯಂತೆ,
ಹರಿದಲ್ಲೆಲ್ಲಾ ಉದ್ಧರಿಸುವ ಪರಿಯಂತೆ,
ಸಾಗರದ ಅರಿವುಂಟು, ಅದನು ಸೇರುವ ಗುರಿಯುಂಟು,
ಪ್ರವಾಹವಾದರೆ ನೊಂದ  ಜೀವಗಳ ನಿಟ್ಟುಸಿರುಂಟು.


ನಿಚ್ಚಳವಾದ ಮುಗ್ಧ ಮಗುವಿನ ನಗೆಯಂತೆ,
ಒಡಲಾಳದಲಿ ಆನಂದ ತುಂಬುವ ಹಾಸ್ಯದಂತೆ,
ಹರಡಿದರೆ ಹಾಸ್ಯವಂತೆ, ತುಸು ಹೆಚ್ಚಾದರೆ ಕೇಕೆಯಂತೆ,
ಮತ್ತೂ ಹೆಚ್ಚಾದರೆ ಹುಚ್ಚನ ಅವಾಂತರವಂತೆ.


ಹತ್ತು ತಲೆಗಳುಳ್ಳ ರಾವಣನಂತೆ,
ವಿನಯವಂತನಾಗಿರಲು ಸಾಧಕನಂತೆ,
ಮದಾಂಧನಾಗಿರಲು ಬಾಧಕನಂತೆ,
ಹಠವಾದಿಯಾಗಿರಲು ವಧೆಯೇ ನಿಜವಂತೆ.

ತುಳುಕಲಾರದ ತುಂಬಿದ ಕೊಡದಂತೆ,
ಪರಿಪೂರ್ಣತೆಯ ಸಂಕೇತವಂತೆ,
ತುಂಬಿದ ಕೊಡದಲಿ ಮತ್ತೆ ತುಂಬಲಾಗದಿರಲು,
ಜ್ಞಾನವನು ಚೆಲ್ಲಿ ತುಂಬುತಲಿರುವುದು ಪುನರಾವರ್ತನೆಯಂತೆ.




Saturday, November 17, 2012

ಕೆಂಪು ಚಂದಿರ



ನೀಲಿ ಮೇಘದಲಿ ಕಪ್ಪಡರಿ ಸಂಜೆ ಕವಿದೈತೆ,
ಕಣ್ಮಿಕ್ಸಿ ಮಿನುಗೋ ತಾರೆಗಳು ಮೇಲೇರಿ ಬಂದಾವೆ.
ಅವರ ಹಿಂದೆ ಹೂನಗೆ ಬೀರಿ ಚಂದಪ್ಪ ಬಂದವ್ನೆ,
ದೂರದಿ ತಾರೆಯ ನೋಡಿ ನಾಚಿ ಕೆಂಪಗಾಗವ್ನೆ.


ತನ್ಮೋರೆ ತೋರಿ ತಾರೇರ ಮೆಚ್ಸೋಕೆ ಹುಣ್ಮೆ ಬಂದಿಲ್ಲ,
ಬೆಳ್ಕಿಲ್ದ ತನ್ಮೋರೆ ತೋರೋಕೆ ಅವ್ನಿಗೆ ಧೈರ್ಯ ಸಾಲ್ತಿಲ್ಲ,
ಮಾತಿಗೆ ಮಾತು ಉಗುಳಲ್ಲೇ ಒಣಗಿ ಮೋರೆ ಸೊಟ್ಟಗಾಗೈತೆ,
ಸಂಕಟ ತಾಳ್ದೆ ಉನ್ಮತ್ತ ಚಂದಪ್ಪ ಕೆಂಪಗಾಗವ್ನೆ.


ಮನೆಬಿಟ್ಟು ಓಡ್ ಹೋಗಿ ತಾರೇರ ಹಿಡಿಯೋಕೆ ಭೂಮ್ತಾಯಿ ಬಿಡ್ತಿಲ್ಲ,
ತಾರೆಯು ಕಣ್ಮಿಕ್ಸಿ ತುಂಟಾಟ ಮಾಡೋ ಸ್ವಭಾವ ಬಿಡ್ತಿಲ್ಲ,
ತಾರೆಯು ಕರೆದರೂ ಹೋಗೋಕೆ ಆಗ್ದೆ ಸಂಕಟ ಪಡ್ತಾವ್ನೆ,
ಸಿಟ್ನಲ್ಲಿ ಚಂದಪ್ಪ ಮುಖ ಸುಟ್ಕೊಂಡು ಕೆಂಪಗಾಗವ್ನೆ.


ಚಂದಪ್ಪನ್ ಸಿಟ್ ಕಂಡು ಭೂಮ್ತಾಯಿ ಮನದಲ್ಲೇ ಮರಗವ್ಳೆ,
ಆಕಾಶರಾಜಂಗೆ ದುಂಬಾಲು ಬಿದ್ದು ಸಂಬಂಧ ಜೋಡ್ಸವ್ಳೆ,
ಹುಣ್ಣಿಮೆ ದಿನದಂದು ಚಂದಪ್ಪ-ತಾರೇರ ಲಗ್ನ ಆಗೈತೆ,
ಕನಸು ನನಸಾದ ಉತ್ಸಾಹದಾಗೆ ಚಂದಪ್ಪ ಕೆಂಪಗಾಗವ್ನೆ.


ಈ ಕಥೆ ಹೇಳಿ ನನ್ನವ್ವ ನನಗೆ ದಿನಾ ಉಣುಸ್ತಿದ್ಲು,
ಅದನೇ ನಂಬ್ಸಿ ಆಷ್ಚರ್ಯ ತರ್ಸಿ ತುತ್ತು ನುಂಗುಸ್ತಿದ್ಲು,
ಬೆಳೆಯೋ ಕರಗೋ ಚಂದಪ್ಪನ್ ನೋಡಿ ನಾ ಬೆರಗಾಗಿದ್ದೆ,
ಅರಿವೇನೇ ಇಲ್ದಂಗೆ ಚಂದಪ್ಪ ಮಾತ್ರ ಕೆಂಪಗೇ ಅವ್ನೆ.


ನಾ ಬೆಳ್ದೆ, ಬುದ್ಧಿ ಬೆಳ್ದು ಙಾನ ಬಂದೈತೆ,
ಧೂಳೇರಿ ಬೆಳಕೊಡ್ದು ಕೆಂಪಾಗೋದೆಂದು ಅರಿವು ಮೂಡೈತೆ,
ಚಂದಪ್ಪನ್ ಗುಟ್ಟು ಹೊರಗಾಗಿ ನನಗೆ ನಗುವು ಮೂಡೈತೆ,
ದಡ್ಡ ನಾ ಕಲಿತೆ ಎಂದು ನಗುವಲ್ಲಿ ಚಂದಪ್ಪ ಕೆಂಪಗಾಗವ್ನೆ.


ಅಮ್ಮನ ಕಥೆಯಾಗಿನ ಸೊಗಸು ಓದ್ನಾಗ್ ಯಾಕಿಲ್ಲ?
ಈಟುದ್ದ ಕಲ್ತ್ರೂ ತುತ್ತು ಗಳ್ಸಿದ್ರೂ ಅಚ್ಚರಿ ಯಾಕಿಲ್ಲ?
ಮನಸ್ನಾಗೆ ಕೊರಿತಿರೋ ಈ ಪ್ರಶ್ನೆ ಚಂದಪ್ಪಂಗ್ ಕೇಳ್ದೆ ನಾನೆ,
ಗೊತ್ತಿಲ್ಲೆಂದ್ ಪೆಚ್ಚಾಗಿ ನಕ್ಕು ಚಂದಪ್ಪ ಇಂದು ಕಪ್ಪಗಾಗವ್ನೆ.







Sunday, May 2, 2010

ಪರಂಪರೆ

ಅನುಭವದ ಕಲಿಕೆಯಿಂದ ತಿಳಿಯಿತು ಮಾತೊಂದು,
ಜಾಣ ತಲೆಯ ನಾಮಕರಣಧಿ ಹೆಸರಾಯಿತು ನಿಯಮವೆಂದು,
ಜೀವನರಾಗದ ಮಾಧುರ್ಯವನು ಉಳಿಸುವ ಪರಿ,
ನಿಯಮಗಳ ಗುಚ್ಚಕೆ ಪರಂಪರೆಯೆಂದು ಕರಿ.

ಹಿರಿಯರ ಅನುಭವವೇ ನಿಯಮವಾಗಿ ಹೊಮ್ಮಿರಲು,
ಯುವ ಪೀಳಿಗೆಯು ತಿಳಿಯದೆ ಹೀಯಾಳಿಸಲು,
ಪರಂಪರೆಗೆ ಮೂಢನಂಬಿಕೆಯ ಕಿಲುಬು ಹತ್ತಿರಲು,
ಕಾಲಕನುಗುಣವಾಗಿ ಬೆಳೆಯುವ ಅನಿವಾರ್ಯತೆ ಬಂದಿರಲು.

ಆಚರಣೆಯಿರದ ಹಬ್ಬದ ಅನಿವಾರ್ಯತೆ ಇಲ್ಲ,
ಅರ್ಥವಾಗದ ಜ್ಞಾನದ ಉಪಯೋಗ ಸಲ್ಲ,
ಪರಂಪರೆ ಜ್ಞಾನದ ಒಂದು ಒಗಟು,
ಕುರುಡು ಆಚರಣೆಯಾಗಿದೆ ಇಂದಿನ ಬಿಕ್ಕಟ್ಟು.

ನಮ್ಮ ಹಿರಿಯರ ಸಾಲ ಈ ಪರಂಪರೆ,
ನಮ್ಮ ಕಿರಿಯರ ಆಸ್ತಿ ಈ ಪರಂಪರೆ,
ಸರಿಯಾಗಿ ತಿಳಿಸದೇ ಹೋದರೆ ಸೋಲು ನಮ್ಮದೇ,
ತಲೆಮಾರುಗಳ ಸೋಲಿನಿಂದ ನಾವಿರುವೆವು ನಂಬದೆ.

ಸಂಕೋಲೆಯಾಗದಿರಲಿ ನಮಗೆ ನಮ್ಮಯ ಪರಂಪರೆ,
ಯೋಚನೆಗೆ ಮುನ್ನುಡಿಯಾಗಿರಲಿ ನಮ್ಮ ಆಚರಣೆ,
ತಲೆಮಾರುಗಳ ತಪ್ಪುಗಳು ಮರುಕಳಿಸದಿರಲಿ,
ಕಿರಿಯರು ನಮ್ಮತನದಲಿ ಹೆಮ್ಮೆ ಪಡಲಿ.

ಪ್ರಶ್ನಿಸುವ ಅಧಿಕಾರವಿರಲು ಆಚರಣೆಗಳ ಮೇಲೆ,
ಪ್ರಶ್ನೆಗಳ ಬಾಣವ ಚಲಾಯಿಸೋಣ ಮೇಲಿಂದ ಮೇಲೆ,
ಆದರೆ ಪ್ರಶ್ನಿಸೋಣ ನಂಬಿಕೆಯ ಸಾಬೀತು ಪಡಿಸಲು,
ಪ್ರಶ್ನೆಗೆ ಅರ್ಥವಿರದು ಅಪನಂಬಿಕೆಯ ಲೇಪವಿರಲು.

ನಗುವೆವು ನಾವು ಮಾನವನ ಇತಿಹಾಸ ನೋಡಿ,
ಆತನ ಆಚರಣೆ-ಪರಂಪರೆ ನಮಗಿಂದು ಮೋಡಿ,
ಪರಂಪರೆ ಆಗದಿರಲಿ ಮುಂದಿನ ಪೀಳಿಗೆಗೆ ಅಪಹಾಸ್ಯ,
ಪ್ರಶ್ನೆಗಳ ಕೇಳೋಣ ಕೊನೆಗಾಣಿಸಲು ಈ ಜ್ಞಾನದಾಸ್ಯ.

ಜೀವನದಲ್ಲಿರುವುದು ಒಂದೇ ಬಾಳಿನ ಸತ್ಯ,
ಅದನರಿಯುವುದೇ ಪ್ರತಿ ತಲೆಮಾರಿನ ಗುರಿಯು,
ಅದರತ್ತ ನಡೆಸುವ ಪಯಣಕೆ ಪರಂಪರೆಯೇ ವಾಹನ,
ಮೂಢರಾದರೆ ನಡೆಸುವೆವು ದಿಕ್ಕಿನ ಅರಿವಿಲ್ಲದೆ... ಅದೇ ವಾಹನ...

Saturday, August 1, 2009

ಅನ್ವೇಷಣೆ

ಹೆಜ್ಜೆಯ ಮೇಲೊಂದು ಹೆಜ್ಜೆಯನಿಡುತ,

ಇಲ್ಲದಿರುವುದನು ಪಡೆಯುವ ತುಡಿತ,

ಇರುಳಿನ ಕನಸನು ಪಡೆಯುವ ಹವಣಿಕೆ,

ಕೈಗೆಟುಕದ ಕನಸನು ಗೆಲ್ಲುವ ಚಡಪಡಿಕೆ.

ಆಸೆಗಳ ನಿಧಿಯುಂಟು ಹೃದಯಾಂತರಾಳದಲಿ,

ಕನಸುಗಳ ಹೆಪ್ಪುಂಟು ಆಸೆಯ ಮೊಸರಿನಲಿ,

ಅಕ್ಷಯ ಪಾತ್ರೆಯಿದು ಮೊಸರು ಮುಗಿಯಲಾರದು,

ಸತ್ತರೆ ಮತ್ತೊಂದು ಜನಿಸುವ ಜಾತಿಯಿದು.

ಜೀವನದ ರಸವಿದು ಆಸೆ ಕನಸಿನ ಮಿಲನ,

ಬೆಳವಣಿಗೆಯ ನಾಂದಿಯಿದು ಹುಮ್ಮಸ್ಸಿನ ಸಿಂಚನ,

ಧ್ಯೇಯವಾಗಿ ಹಾರುತ ಪೀಳಿಗೆಗಳ ನಡುವೆ,

ತುಡಿತಕೆ ಬಲಿಯಾಗಿ ಶತಮಾನಗಳೇ ಕಳೆದಿವೆ.

ಜೀವನದ ಓಟದಲಿ ಇಲ್ಲದಿರುವುದರ ಆಸೆಗೆ,

ಜೊತೆಗಿರುವ ನಿಧಿಯನು ಸರಿಸುವೆವು ಬದಿಗೆ.

ಹುಚ್ಚೆದ್ದು ಪಡೆದ ಕನಸಿನ ಖುಷಿಗೆ,

ಆಯಸ್ಸು ಮುಂದಿನ ಇರುಳಿನವರೆಗೆ.

ಜೀವನವಿದು ಬರಿಯ ಹುಚ್ಚು ಓಟವೇ?

ತೃಪ್ತಿಯ ಆಸ್ವಾದನೆಗೆ ಸಮಯವು ಬೇಡವೇ?

ನನಗಿಂದು ಜಗವು ಓಟದ ಸಂತೆಯಾಗಿಹುದು,

ಜಗವು ನನ್ನನ್ನು ಮರಳನೆಂದು ಕರೆದಿಹುದು.

ಹಾರುವ ಎತ್ತರದ ಎಣಿಕೆಯಿರಬೇಕು,

ಕನಸುಗಳ ಒಡನಾಟಕೆ ಬೇಲಿಯಿರಬೇಕು.

ಕ್ಷಣಕ್ಷಣದ ಕಷ್ಟದಲಿ ಗುರಿಯನೇ ಕಾಣುತಾ,

ಗೆದ್ದ ಪ್ರತಿಕ್ಷಣದಿ ತೃಪ್ತರಾಗಿ ತೇಲುತಾ.

ಮುಂದಿನ ಕನಸಿಗೆ ಹೇಳಿರಿ ನಿಲ್ಲೆಂದು,

ಈಗಷ್ಟೆ ಗೆದ್ದಿರುವೆ ಹಿಂದಿನ ಕನಸೊಂದು.

ಜೊತೆಗಿರುವ ಆಸ್ತಿಯಲ್ಲವೇ ಅಮೂಲ್ಯ,

ಮರೆಯಬೇಡಿ ಆಪ್ತರನು ಇಂತಹ ಸಮಯ.

ಕನಸಗಳ ಕಾಣುವುದು ತಪ್ಪಿರಲಾರದು,

ತ್ರುಷೆಯಿರದ ಜನರಿಂದ ಜಗವು ನಡೆಯಲಾರದು,

ನಾಳಿನ ತುಪ್ಪದಾಸೆಗೆ ಚೆಳಬೇಡಿ ಕೈಯಲ್ಲಿನ ಬೆಣ್ಣೆ,

ತಪ್ಪಲ್ಲವೇ ಬರಿಯ ಕನಸುಗಳ ಹುಚ್ಚು ಅನ್ವೇಷಣೆ?

Saturday, January 17, 2009

ವಾನಪ್ರಸ್ಥ

ಜ್ಞಾನದ ಬೆಳಕಿನಲಿ ಜೀವನವ ಸವೆಸಲು,
ನವೀನ ಸಂಬಂಧಗಳ ಕೊಂಡಿಗಳನು ಬೆಸೆಯಲು,
ಜಗದಿ ತನ್ನ ಗುರುತನು ಉಳಿಸಲು ಪ್ರಾಯಸ್ಥ,
ಆಸೆಗಳ ಗೆಲ್ಲಲು ಹವಣಿಸುವವ ಗೃಹಸ್ಥ.

ತಾ ಬೆಸೆದ ಕೊಂಡಿಗಳನು ಕಳಚುತಾ,
ಆಸೆಗಳಿಂದ ವಿಮುಖನಾಗಿ ಬೆಳೆಯುತಾ,
ಆತ್ಮಜ್ಞಾನವ ಪಡೆದರೆ ಪರಮಾರ್ಥಿ,
ನಾಂದಿ ಹಾಡಿದವ ವಾನಪ್ರಸ್ಥ.


ವೈಭವಗಳ ತಾ ಮರೆತು ಸನ್ಯಾಸಿಯಾಗಲು ಹವಣಿಸುವವ,
ಸೋತುಬಿಡಲೇ ಎನ್ನುವ ಮನಸನು ನಿಗ್ರಹಿಸುವ,
ಅಳುಕಿನ ಬಂದಿಯಾಗದೆ,ನಲಿವಿನ ದಾಸನಾಗದೆ,
ನಿರಪೇಕ್ಷಿತನಾಗಲು ಪಲ್ಲವಿಯ ನೀ ಹಾಡಿದೆ.

ಧೈರ್ಯವಿರಬೇಕು ಮೇಣದ ಮನಸನು ಕಲ್ಲಾಗಿಸಲು,
ಜೀವನ್ಮೋಹದ ಜ್ವಾಲೆಯಿಂದ ದೂರವಿರಿಸಲು,
ಮೋಹಿತನಾಗದೆ ಮೋಹವನ್ನು ದೂರವಿಡುವ,
ಸನ್ಯಾಸದ ನಾಂದಿ ಹಾಡುವ ಧೈರ್ಯಸ್ಥ ಈ ವಾನಪ್ರಸ್ಥ.

ಆಸೆಯ ದಾಸನಿಂದ ಆಸೆಯ ಗುರುವಾಗಲು,
ಬಿಸಿರಕ್ತದ ಗೃಹಸ್ಥನಿಂದ ತಾಳ್ಮೆಯ ಪರಮಾರ್ಥಿಯಾಗಲು,
ವೈರುಧ್ಯಗಳ ನಡುವಿನ ಪಯಣವಲ್ಲ ಸುಲಭ,
ದಿಗಂತಕೆ ಹೊರಟಂತೆ ಕಾಣಲು ಕಲೆತ ಪೃಥೆ-ನಭ.


ಮಾಯೆಯ ಬಿಸಿಲ್ಗುದುರೆಯಿಂದ ಮೇಲೇರಿ ಬಂದು,
ಸೂಸುತ ಜ್ಞಾನದ ಸ್ಫಟಿಕ ಕಿರಣಬಿಂದು,
ಕ್ಷಣಕ್ಷಣದಲ್ಲೂ ಮನವನು ಕಠೋರವಾಗಿಸುತ,
ಅಂತರಂಗ ಬಹಿರಂಗವನು ಶುದ್ಧಗೊಳಿಸುತಾ.


ಗೃಹಸ್ಥನಾದೊಡೆ ಮನೋನಿಗ್ರಹ ಕಷ್ಟ,
ಸನ್ಯಾಸಿಯಾದೊಡೆ ಕಾಯ್ದುಕೊಳ್ಳಲು ಕಷ್ಟ,
ಅರಿಷಡ್ವರ್ಗಗಳ ಮೆಟ್ಟುವ ಪಯಣವಿನ್ನೂ ಕಷ್ಟ,
ಅದನೇ ಮಾಡುವವ ವಾನಪ್ರಸ್ಥ ಮರೆತು ತನ್ನೆಲ್ಲ ಅಭೀಷ್ಟ.

ಅವಲಂಬಿತರನು ಪೋಷಿಸಬೇಕು,ಬಾಹ್ಯ ಜ್ಞಾನವ ರಕ್ಷಿಸಬೇಕು,
ಪ್ರೀತಿಪಾತ್ರರಲಿ ಸೋಲಬೇಕು, ಬಾಹ್ಯ ಜೀವನದಿ ಗೆಲ್ಲಬೇಕು,
ಇದನು ಸಾಧಿಸಲು ಆಗಬೇಕು ನಾ ಅನಿವಾರ್ಯ ಗೃಹಸ್ಥ,
ಆದರೂ ಮನದಲಿ ಇಚ್ಚಿಸಿರುವೆ ನಾ ಆಗಲು ನಿರಂತರ ವಾನಪ್ರಸ್ಥ.

Wednesday, December 24, 2008

ದ್ವಂದ್ವ

ಉದ್ಧಟ ಮನದ ಆರ್ಭಟವಿರಲು,
ಧರ್ಮಾಧರ್ಮದ ಗೊಂದಲವಿರಲು,
ಸರಿಯಾದ ದಾರಿಯ ಹುಡುಕುತ ಕೂರುವೆವು,
ನಿರ್ಧರಿಸಲಾಗದು ಅದುವೇ ದ್ವಂದ್ವವು.

ಬಾಳದಾರಿಯಲಿ ಅನೇಕ ಕವಲುಗಳು,
ದ್ವಂದ್ವ ದರ್ಶನವ ನೀಡುವ ಕವಲುಗಳು.
ಆರಿಸಿದ ಹಾದಿಯೇ ಬಾಳಿನ ಸತ್ಯವು.
ಮಿಥ್ಯವೇ ಸರಿಯಾದ ಬಗೆಗಳು ಹಲವು.

ಅಹಂಕಾರದ ದೀಪವು ನಮ್ಮೊಳು ಉರಿಯಲು,
ಸಾಧನೆಗೈಯುವ ಹುಮ್ಮಸ್ಸನು ನೀಡಲು,
ನಾನು ನಾನೆಂಬ ಅಹಂಕಾರವ ಇಲ್ಲದಿರೆ,
ಯಾರಿಗಾಗಿ ನಾ ಸಾಧಿಸಲಿ ಹೇಳು ದೊರೆ?

ಅಹಂಕಾರದ ದೀಪಕೆ ಹಠವೇ ಜೀವವು,
ಹಠವಿಲ್ಲದಿರೆ ನಾವಿದ್ದರೂ ನಿರ್ಜೀವ,
ನಮ್ಮಲಿ ಹಠದ ಹರಿವಿರದಿದ್ದರೆ,
ನಮಗೆ ನಾವೇ ಆಗುವೆವು ಹೊರೆ.

ಧರ್ಮವೋ ಮಿತ್ರನೋ ಎಂಬ ಪ್ರಶ್ನೆಯಲಿ,
ಮಿತ್ರನನು ಆರಿಸಿದ ಪ್ರಮೇಯಗಳೆಷ್ಟೋ?
ಮಿತ್ರನೇ ತಪ್ಪಾಗಿದ್ದ ಪಕ್ಷದಲಿ,
ನಮ್ಮ ತಪ್ಪನ್ನು ಒಪ್ಪಿಕೊಂಡ ವಿಧಗಳೆಷ್ಟೋ?

ಸರಿ ತಪ್ಪುಗಳ ದರ್ಶನವಿರದೆ ನಾವು,
ಕಾಲಕನುಗುಣವಾಗಿ ನಡೆಯುವೆವು ನಾವು,
ನಮ್ಮ ಪ್ರತಿಯೊಂದು ನಿರ್ಧಾರವು,
ದ್ವಂದ್ವವ ದಾಟಿ ಬಂದ ಪ್ರಮೇಯವು.

ಕವಲುಗಳೇ ನಿರ್ಧಾರಗಳೇ ಜಗದ ಶಕ್ತಿಯು,
ನಿನ್ನ ತಪ್ಪುಗಳಲ್ಲೇ ಭಗವಂತನ ಯುಕ್ತಿಯು.
ಜೀವನದ ಸುಂದರ ದರ್ಶನ ಈ ಕವಲು,
ಜೀವನ ಮಾಯಾಸುಳಿಯ ಒಡಲು.

ಗೆಲುವು ನೋಡಿದರೆ ಹರುಷದ ಆಗರ,
ಸೋಲು ಕಂಡರೆ ಕಲಿಕೆಯ ಭಂಡಾರ,
ಇದುವೇ ನಮ್ಮ ಜೀವನದ ದ್ವಂದ್ವ,
ಇದಿಲ್ಲದೇ ಜೀವನ ಹರುಶವಿರದ ಪರ್ವ.

Thursday, December 11, 2008

ನಿನ್ನ ಒಂದು ಹಠವು

ಮನದ ಮೂಲೆಯಲಿ ಕತ್ತಲ ಕೋಣೆಯಲಿ,
ಸುಂದರ ಘಳಿಗೆಯಲ್ಲಿ ಆಸೆ ಮೂಡಿದೆ.
ಬಿಸಿಯ ರಕ್ತದ ಗೆಲುವಿನ ಓಟದಲಿ,
ನೀನರಿಯದೆ ಆಸೆ ಹಠವಾಗಿ ಮಾರ್ಪಟ್ಟಿದೆ.

ನನ್ನ ರಭಸವ ನೀ ತಡೆದು ನೋಡು,
ನಾನಿಲ್ಲದೆ ಜಗದೊಳು ಗೆಲ್ಲುವವರಾರು,
ಭಯವನ್ನೇ ನಾ ಹೆದರಿಸುವೆ,
ಮಿಕ್ಕವರನ್ನು ನಾನು ಇನ್ನೆಲ್ಲಿ ಬಿಡುವೆ?

ಆಸೆಯ ಮಳೆಗೋ ವಯಸಿನ ಹದಕೋ,
ನಿನ್ನೊಳಗಿನ ಅಸುರನು ಎದ್ದಿಹನು,
ಹಠವೆಂದು ಹೆಸರಿಸಿ, ಮನಸನು ಚಿವುಟಿಸಿ,
ಗೆಲುವಿನ ನಗುವನು ನಕ್ಕಿಹನು.

ನಿನ್ನ ನಗುವಿನಲಿ ನನ್ನ ವಿರಹವಿದೆ,
ನನ್ನ ಅಶ್ರುವನು ನೀ ಪ್ರವಹಿಸಿದೆ.
ಪುನಃ ಪುನಃ ಕರೆದು ನಾ ಕೆಂಪಾದೆ,
ಹರಿವ ನೀರನ್ನು ನಾ ತಡಿಯಲಾಗದೆ.

ಹರಿವ ಓಟದಲಿ ನಿಲ್ಲಲು ನಾನು,
ಹೋಗಬೇಡೆಂದು ಹೇಳುವ ಕಣ್ಣು,
ಒಗ್ಗಟ್ಟಾಗಿ ಹರಿದರೂ ಇನ್ನು,
ನಿನ್ನೆದುರು ನಾ ಮಾಡಲಿ ಏನು?

ಹಾರುವ ನನ್ನಯ ಪರ ನೀ ಹರಿದೆ,
ನನ್ನೊಳು ಆಸೆಯ ಭಾರವ ಮೂಡಿಸಿದೆ,
ನೀ ನನಗೆ ಬೇಡವೆಂದು ನಾ ಓಡಿದರೆ,
ಕಣ್ಣೀರ ಹನಿಯ ಒದ್ದೆಯು ಹಿಂದೆಳೆದಿದೆ.

ಜೀವಕೆ ನಾನು ಬಹಳ ಅವಶ್ಯವೇ,
ಮೂಗಿನೊಳು ಬರಿಯ ಬಿಸಿಯ ಅನುಭವವೇ,
ಹಿಡಿದಿಹೆ, ನಿಟ್ಟುಸಿರ ಬಿಡುತಿರುವೆ,
ತಡೆಯಲಾಗದೆ ಭಾರವ ನಾ ಎಂದೋ ನಿಲ್ಲುವೆ.

ಹಸಿರು ಗಿಡವಾಗಿದ್ದೆ ನಾನು,
ಮರವಾಗಿ ಬೆಳೆಯಬೇಕೆಂದಿದ್ದೆ ನಾನು,
ಚಿವುಟಿದೆಯಾ ನನ್ನ, ಮೊಟಕಿದೆಯಾ ಎನ್ನ,
ದುಷ್ಟ, ಹೇಳು ಯಾರು ಹೊಡೆವರು ನಿನ್ನ.

ಎನಗೆ ಸಾವು ಎಲ್ಲಿದೆ, ಮನವು ನನ್ನ ಕೈಲಿದೆ,
ನಿಮ್ಮ ದುಃಖ ವಿಷಾದಕೆ ನನ್ನ ಥೂ ಇದೆ.
ನನ್ನ ಬಾಳ ಪಯಣಕೆ ನೀವೇ ಮೆಟ್ಟಿಲು,
ಮೇಲೆ ನಿಂತ ಗೆಲುವ ಕೈಗೆ ನನ್ನ ತೊಟ್ಟಿಲು.

ಮೇಲಿನ ಮಾತನು ಕೇಳಿದಿರಲ್ಲವೇ,
ಎಲ್ಲಿಯದೆಂದು ತಿಳಿಯಲಿಲ್ಲವೆ ?
ಹಾಕಿರಿ ಯೋಚನೆಯ ಮಣೆಯನು,
ಮನದೊಳಗೆ ಕಾಣುವಿರಿ ಉತ್ತರವನ್ನು.

ಕಣ್ಣಿನ ವಿರಹವು, ಕಣ್ಣೀರ ಓಟವು,
ಹಾರುವ ಮನದ ಪರಿತಾಪವು,
ಉಸಿರಿನ ಬಿಸಿಯೂ, ಭಾವನೆಯ ಹಂಸಗಾನವು,
ನಿನ್ನದಲ್ಲದ ಮನಸಿನ ನಿನ್ನಯ ಕರ್ಮಗಳಿವು.

ಆಸೆಯು ಮುರಿದೊಡೆ ಅಳುವೇ ನೀನು,
ಗೆಲ್ಲಲು ನೂರಾರು ಮನಸುಗಳ ಮುರಿಯುವೆ ನೀನು,
ಗೆಲುವಿನ ಹಿಂದಿನ ಕಣ್ಣೀರು ಕಾನದಾದವು,
ಅಟ್ಟಹಾಸದಿ ನಗುತಲಿರಲು ನಿನ್ನ ಒಂದು ಹಠವು.....

Thursday, November 27, 2008

Taragelegalu Uduridante...

Aaseya maayamrugava benattutiralu,
praaniyu sigade kaanadaagalu,
kanasinale naa basavalide,
marada neralinali naa viramiside.

Maradinda tarageleyondu udurithu,
nannolagina newtonnana horatandithu.
Manuja jeevanavu maradanthallave,
Adarinda kaliyalu saakashtillave?

Jeevanadali beleyuta naavu,
kanasugala chiguruala belesuvevu.
Parshramada bisilige myyoddi,
kashtavemba maleyu beleyalu addi.

Bevarina sinchanadi chiguru molethu,
beleyuvudu marada kombeyaagi hosathu.
Saphala jeevanake kanasugale aadhara,
nooraaru kanasugalalle jeevana nirbhara.

Parishramada horethu chiguru murutuvudu,
bevaru hariyada horethu kanasu karaguvudu.
Vrukshadinda kaliyuva maatu baruvudilli,
onagida tarageleyinda gobbara maaduvudalli.

Chiguru muridode alutha kooruvudilla,
haakuva parishramava biduvudilla.
Huttisuvudu mattondu chiguranu,
bharavaadalli beelisuta tannade rembeyanu.

Solina tarageleyannu beelisuta naavu,
adara gobbaradali gellabeku naavu.
Kanasugala rembeyinda beleyabeku,
bharavadalli muridu munnuggabeku.

Beleyabeku jeevanadalli maragalanthe,
danidavarige neralu belakina kodeyanthe,
geluve jeevanada harittinante,
soleniddaru taragelu uduridante.

Saturday, November 8, 2008

WELCOME FRIENDS!!!!

Welcome Friends to my blog.....

The place where I get to say things I wished to say.. where I get to put across thoughts to the larger community.. the intelligentsia and also to the people who have known me for long.. but did not notice that I also had this facet in my personality..

To make the journey more exciting and more special.. I invite you all to share what you feel about what I feel and do..

Waiting for your arrival!!!! Cos this is also one of the homes for my heart apart from my friends' hearts!!!

Wish me luck so that i can give my best!!!