ಮೊಗದಂದ ಹೆಚ್ಚಿಸುವ ಕಾಡಿಗೆಯಂತೆ,
ವಕ್ರ ದೃಷ್ಟಿ ಇಳಿಸುವ ಬೊಟ್ಟಂತೆ,
ನಯನಕಾದರೆ ಸೊಗಸು, ಗಲ್ಲಕಾದರೆ ಸೊಗಸು,
ಎಲ್ಲ ಕಡೆ ಇಟ್ಟೇನೆಂದರೆ ಹೊಲಸು.
ತುಸು ಕಲ್ಲು, ತುಸು ಸಿಹಿ, ಕಲ್ಲು ಸಕ್ಕರೆಯಂತೆ,
ಬಾಯೊಳಿಟ್ಟರೆ ತಾನಾಗೇ ಕರಗುವುದಂತೆ,
ಕೈಯೊಳು ಬಚ್ಚಿಟ್ಟರೆ ಬರಿಯ ಜಿಡ್ಡಂತೆ,
ಇಟ್ಟಲ್ಲೇ ಮರೆತರೆ ಇರುವೆಗಳ ಪಾಲಂತೆ.
ವಿಶಾಲವಾಗಿ ಪ್ರವಹಿಸುವ ನದಿಯಂತೆ,
ಹರಿದಲ್ಲೆಲ್ಲಾ ಉದ್ಧರಿಸುವ ಪರಿಯಂತೆ,
ಸಾಗರದ ಅರಿವುಂಟು, ಅದನು ಸೇರುವ ಗುರಿಯುಂಟು,
ಪ್ರವಾಹವಾದರೆ ನೊಂದ ಜೀವಗಳ ನಿಟ್ಟುಸಿರುಂಟು.
ನಿಚ್ಚಳವಾದ ಮುಗ್ಧ ಮಗುವಿನ ನಗೆಯಂತೆ,
ಒಡಲಾಳದಲಿ ಆನಂದ ತುಂಬುವ ಹಾಸ್ಯದಂತೆ,
ಹರಡಿದರೆ ಹಾಸ್ಯವಂತೆ, ತುಸು ಹೆಚ್ಚಾದರೆ ಕೇಕೆಯಂತೆ,
ಮತ್ತೂ ಹೆಚ್ಚಾದರೆ ಹುಚ್ಚನ ಅವಾಂತರವಂತೆ.
ಹತ್ತು ತಲೆಗಳುಳ್ಳ ರಾವಣನಂತೆ,
ವಿನಯವಂತನಾಗಿರಲು ಸಾಧಕನಂತೆ,
ಮದಾಂಧನಾಗಿರಲು ಬಾಧಕನಂತೆ,
ಹಠವಾದಿಯಾಗಿರಲು ವಧೆಯೇ ನಿಜವಂತೆ.
ತುಳುಕಲಾರದ ತುಂಬಿದ ಕೊಡದಂತೆ,
ಪರಿಪೂರ್ಣತೆಯ ಸಂಕೇತವಂತೆ,
ತುಂಬಿದ ಕೊಡದಲಿ ಮತ್ತೆ ತುಂಬಲಾಗದಿರಲು,
ಜ್ಞಾನವನು ಚೆಲ್ಲಿ ತುಂಬುತಲಿರುವುದು ಪುನರಾವರ್ತನೆಯಂತೆ.
Thumba Chennagidhe.
ReplyDeleteತುಂಬಾ ಧನ್ಯವಾದಗಳು ರೂಪಾ. ದಿನನಿತ್ಯದ ಅನುಭವಗಳಲ್ಲಿ ನನಗೆ ಕಂಡ ಸತ್ಯ ಇದು.
ReplyDeleteಅಬ್ಬಾ!ನಿಮ್ಮ ಕವನ ಮಧು ತುಂಬಿದ ಕೊಡದಂತೆಯೇ ಇದೆ!
ReplyDelete