Saturday, November 17, 2012

ಕೆಂಪು ಚಂದಿರ



ನೀಲಿ ಮೇಘದಲಿ ಕಪ್ಪಡರಿ ಸಂಜೆ ಕವಿದೈತೆ,
ಕಣ್ಮಿಕ್ಸಿ ಮಿನುಗೋ ತಾರೆಗಳು ಮೇಲೇರಿ ಬಂದಾವೆ.
ಅವರ ಹಿಂದೆ ಹೂನಗೆ ಬೀರಿ ಚಂದಪ್ಪ ಬಂದವ್ನೆ,
ದೂರದಿ ತಾರೆಯ ನೋಡಿ ನಾಚಿ ಕೆಂಪಗಾಗವ್ನೆ.


ತನ್ಮೋರೆ ತೋರಿ ತಾರೇರ ಮೆಚ್ಸೋಕೆ ಹುಣ್ಮೆ ಬಂದಿಲ್ಲ,
ಬೆಳ್ಕಿಲ್ದ ತನ್ಮೋರೆ ತೋರೋಕೆ ಅವ್ನಿಗೆ ಧೈರ್ಯ ಸಾಲ್ತಿಲ್ಲ,
ಮಾತಿಗೆ ಮಾತು ಉಗುಳಲ್ಲೇ ಒಣಗಿ ಮೋರೆ ಸೊಟ್ಟಗಾಗೈತೆ,
ಸಂಕಟ ತಾಳ್ದೆ ಉನ್ಮತ್ತ ಚಂದಪ್ಪ ಕೆಂಪಗಾಗವ್ನೆ.


ಮನೆಬಿಟ್ಟು ಓಡ್ ಹೋಗಿ ತಾರೇರ ಹಿಡಿಯೋಕೆ ಭೂಮ್ತಾಯಿ ಬಿಡ್ತಿಲ್ಲ,
ತಾರೆಯು ಕಣ್ಮಿಕ್ಸಿ ತುಂಟಾಟ ಮಾಡೋ ಸ್ವಭಾವ ಬಿಡ್ತಿಲ್ಲ,
ತಾರೆಯು ಕರೆದರೂ ಹೋಗೋಕೆ ಆಗ್ದೆ ಸಂಕಟ ಪಡ್ತಾವ್ನೆ,
ಸಿಟ್ನಲ್ಲಿ ಚಂದಪ್ಪ ಮುಖ ಸುಟ್ಕೊಂಡು ಕೆಂಪಗಾಗವ್ನೆ.


ಚಂದಪ್ಪನ್ ಸಿಟ್ ಕಂಡು ಭೂಮ್ತಾಯಿ ಮನದಲ್ಲೇ ಮರಗವ್ಳೆ,
ಆಕಾಶರಾಜಂಗೆ ದುಂಬಾಲು ಬಿದ್ದು ಸಂಬಂಧ ಜೋಡ್ಸವ್ಳೆ,
ಹುಣ್ಣಿಮೆ ದಿನದಂದು ಚಂದಪ್ಪ-ತಾರೇರ ಲಗ್ನ ಆಗೈತೆ,
ಕನಸು ನನಸಾದ ಉತ್ಸಾಹದಾಗೆ ಚಂದಪ್ಪ ಕೆಂಪಗಾಗವ್ನೆ.


ಈ ಕಥೆ ಹೇಳಿ ನನ್ನವ್ವ ನನಗೆ ದಿನಾ ಉಣುಸ್ತಿದ್ಲು,
ಅದನೇ ನಂಬ್ಸಿ ಆಷ್ಚರ್ಯ ತರ್ಸಿ ತುತ್ತು ನುಂಗುಸ್ತಿದ್ಲು,
ಬೆಳೆಯೋ ಕರಗೋ ಚಂದಪ್ಪನ್ ನೋಡಿ ನಾ ಬೆರಗಾಗಿದ್ದೆ,
ಅರಿವೇನೇ ಇಲ್ದಂಗೆ ಚಂದಪ್ಪ ಮಾತ್ರ ಕೆಂಪಗೇ ಅವ್ನೆ.


ನಾ ಬೆಳ್ದೆ, ಬುದ್ಧಿ ಬೆಳ್ದು ಙಾನ ಬಂದೈತೆ,
ಧೂಳೇರಿ ಬೆಳಕೊಡ್ದು ಕೆಂಪಾಗೋದೆಂದು ಅರಿವು ಮೂಡೈತೆ,
ಚಂದಪ್ಪನ್ ಗುಟ್ಟು ಹೊರಗಾಗಿ ನನಗೆ ನಗುವು ಮೂಡೈತೆ,
ದಡ್ಡ ನಾ ಕಲಿತೆ ಎಂದು ನಗುವಲ್ಲಿ ಚಂದಪ್ಪ ಕೆಂಪಗಾಗವ್ನೆ.


ಅಮ್ಮನ ಕಥೆಯಾಗಿನ ಸೊಗಸು ಓದ್ನಾಗ್ ಯಾಕಿಲ್ಲ?
ಈಟುದ್ದ ಕಲ್ತ್ರೂ ತುತ್ತು ಗಳ್ಸಿದ್ರೂ ಅಚ್ಚರಿ ಯಾಕಿಲ್ಲ?
ಮನಸ್ನಾಗೆ ಕೊರಿತಿರೋ ಈ ಪ್ರಶ್ನೆ ಚಂದಪ್ಪಂಗ್ ಕೇಳ್ದೆ ನಾನೆ,
ಗೊತ್ತಿಲ್ಲೆಂದ್ ಪೆಚ್ಚಾಗಿ ನಕ್ಕು ಚಂದಪ್ಪ ಇಂದು ಕಪ್ಪಗಾಗವ್ನೆ.







5 comments:

  1. ಈ ಕತೆಯನ್ನು ನಮ್ಗೆ ತಿಳ್ಸಿದ್ದ ನಿಮ್ಗೂ ಧನ್ಯವಾದಗಳು!

    ReplyDelete
  2. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.. ನಿಮ್ಮೀ ಪ್ರೋತ್ಸಾಹವೇ ನನಗೆ ಮತ್ತಷ್ಟು ಬರೆಯಲು ಸ್ಫೂರ್ತಿ...

    ReplyDelete
  3. Excellent comparison. Good use of "Upameya". Nice depiction of earth's gravity. Full moon to new moon nicely said. The best I liked is the lucid writing.

    ReplyDelete
  4. Thank you so much Prashanth.. I hope to keep improving myself...

    ReplyDelete
  5. ಅಪರೂಪದ ಆಶಯ, ಚೆಂದವಾದ ಭಾಷೆ, ಅರ್ಥಪೂರ್ಣ ಮುಕ್ತಾಯ! :)

    ReplyDelete