Thursday, March 13, 2014

ಬೆಳಕಿನ ಕತ್ತಲೆ

ಹನಿಗಳ ಚಿಟ ಪಟ ಸದ್ದಿಲ್ಲ, ಆದರೂ ಭೋರ್ಗರೆತ,
ಭೂಮಿ-ಮಳೆಯ ಮಿಲನದ ವಾಸನೆಯಿಲ್ಲ, ಆದರೂ ಸಲ್ಲಾಪ,
ಬಿಸಿಲಿನ ಕೆಂಧೂಳಿಯಲ್ಲಿಯ ಕಾಮನಬಿಲ್ಲಿಲ್ಲ, ಆದರೂ ಸಮ್ಮಿಳಿತ,
ಆಲಿಂಗನವೋ, ಆಪೋಷಣವೋ, ಸುಮಧುರ ಅನುಭವವೋ,
ಅದರೊಳು ನಾವೋ, ನಮ್ಮೊಳು ಅದೋ,
ಆತ್ಮಮಿಲನ, ಅಧಃಪತನ, ಅಂಧಕಾರ ವರ್ಷದ ಮೌನರಾಗದಲಿ,
ಜಗಕೆಲ್ಲಾ ಜೋಗುಳ, ನಿತ್ಯ ಸಿಂಚನ, ನಿತ್ಯ ರೋದನ.

ಕಾಲಗರ್ಭದ ಚೊಚ್ಚಲ ಕೂಸಿದು ಕತ್ತಲೆ,
ಬೆಳಕು ಮೊದಲಿರಲು ಕತ್ತಲೆಯ ಜನನವೆಲ್ಲಿ?
ದೀಪವು ಆರುವುದೆಂದು ತಿಳಿದರೂ ಹಚ್ಚುವುದು ಆಶಾವಾದವೇ?
ಅಥವಾ ಕತ್ತಲೆಯೇ ಕೊನೆಯೆಂದು ತಿಳಿಯುವುದು ನಿರಾಶಾವಾದವೇ?
ಅದೆಲ್ಲಾ ಬರಿಯ ಭ್ರಾಂತಿ,
ಕತ್ತೆಲಿಯಿಂದ ಬೆಳಕು, ಬೆಳಕಿನಿಂದ ಕತ್ತಲೆ,
ಇದೇ ಕಾಲಚಕ್ರ, ಸೃಷ್ಟಿಚಕ್ರ, ಜೀವನಚಕ್ರ.

ಬೆಳಕು ಅರಿವಾದರೆ ಕತ್ತಲೆಯೇನು? ಅರಿವಿನಾಚೆಯ ಇರುವೇ?
ಅದು ದಿಟ, ಅಗಾಧ, ಅರಿವು ತೊರೆಯೊಂದೇ, ಅದರಾಚೆಯೇ ಸಾಗರ,
ಸಿರಿತನದ ಸಿಗ್ಗಿಲ್ಲ, ಭವ್ಯತೆಯ ಮೆರುಗಿಲ್ಲ, ಅಂಜಿಕೆಯ ಅಲೆಯೊಂದೆ ಅಲ್ಲಿ,
ಭ್ರೂಣದೊಳಿದ್ದು ಭ್ರೂಣವನ್ನೇ ಕಿತ್ತೊಗೆಯಲು ಸಾಧ್ಯವೇ?
ಪರಿಹಾರವೊಂದೆ, ದಾರಿಯೂ ಒಂದೇ, ಭ್ರೂಣದಿಂದ ಜನನ,
ಅದೇ ಬೆಳಕು, ಕಿಡಿಯಷ್ಟೇ ಬೆಳಕು, ಜೀವನಕಷ್ಟು ಸಾಕು.

ತಾ ಸೃಷ್ಟಿಸಿದ ಅಂಡದಿಂದ ಹೊರಬಂದರೆ ಬೆಳಕು,
ನವೀನತೆಯ ಜನನವೇ ಅದು, ಮರುಜನ್ಮವೇ ಅದು,
ಜ್ಞಾನ ಸೃಷ್ಟಿಯದು, ಸಣ್ಣದಾದ ಭರ್ಜರಿ ಜಯವದು,
ಅಂಧಕಾರವನು ಪ್ರಕಾಶಿಸಿದ ವಿಜ್ಞಾನವದು,
ಕಥೆಯಾಯಿತು, ಶಾಸ್ತ್ರವಾಯಿತು, ಪರಂಪರೆಯಾಯಿತು,
ಕಿಲುಬುಗೊಂಡಿತು, ಮತ್ತೆ ಆರಿಹೊಯಿತು.

ಸೃಷ್ಟಿ ಚಕ್ರವಲ್ಲವೇ? ಮತ್ತೆ ಜನಿಸುವುದು,
ಬೇರೊಂದು ರೀತಿಯಲಿ, ಬೇರೊಂದು ಕಾಲಮಾನದಲಿ,
ಹುಟ್ಟು ಸಾವಿನ ಚಕ್ರಕೆ ಜ್ಞಾನವೂ ಹೊರತಲ್ಲ,
ಕರ್ಮಬಂಧನದಿಂದ ಜ್ಞಾನಕೂ ಮುಕ್ತಿಯಿಲ್ಲ.

ಜನರಿಂದ ಜನಕೆ, ಪಂಗಡದಿಂದ ಪಂಗಡಕೆ, ದೇಶದಿಂದ ದೇಶಕೆ,
ಜ್ಞಾನದ ಕಿಡಿಯು ಹರಡುವುದು, ಹಿರಿದಾಗುವುದು,
ಎಲ್ಲರೂ ಕಿಡಿಯ ಮಾಲೀಕರೆ, ಎಲ್ಲರೂ ವಾರಸುದಾರರೆ,
ಜಾಣರೆಲ್ಲಾ ಕಿಡಿಗಳ ಸೇರಿಸಿ ಮಶಾಲು ಹೊತ್ತಿಸುವರು,
ಬೆಳಕು ಝಗ-ಮಗ, ಕೆಲವರಿಗಷ್ಟೇ ಸೀಮಿತ,
ಮೇಲಕ್ಕೇರಿಸಿ, ಇನ್ನಷ್ಟು ಜನರಿಗೆ ಸೇರಲಿ ಬೆಳಕು,
ಮಗದಷ್ಟು ಮಂದಿಯು ಹೊರಗುಳಿದರು, ಮತ್ತೂ ಮೇಲಕ್ಕೆ ಮಶಾಲು,
ಗಾಳಿಯಲಿ ಅಲುಗಾಡಿದೆ, ದೂರ ಹೋಗಿದೆ, ಸಣ್ಣ ಬೆಳಕೊಂದೇ ಎಲ್ಲರಲ್ಲಿದೆ,
ಬೆಳಕಿನ ಹುರುಪಿನಲಿ, ಧೈರ್ಯದ ಭರವಸೆಯಲಿ, ಮರೆತೇ ಬಿಡುವರು,
ಮೇಲೆ ಹೋದ ಬೆಳಕು, ತನ್ನ ಕೆಳಗೆ ಕತ್ತಲನೇ ಬಿಡುವುದೆಂದು.

ಅದೇ ಬೆಳಕಿನ ಕತ್ತಲೆ, ಆಶಾವಾದದ ನಿರಾಶೆಯೋ, ನಿರಾಶಾವಾದದ ಆಶೆಯೋ,
ಇರುವಿನ ಬೆಚ್ಚನೆಯ ಅನುಭವವೂ ಇದೆ,
ಕೈಗೆಟುಕದ ಭ್ರಮನಿರಸನವೂ ಇದೆ,
ಅಂಧಕಾರವನು ತೊಲಗಿಸುವ ಯತ್ನವೂ ಇದೆ,
ಆದರೆ ಅಸಾಧ್ಯವದು!!!! ಎಷ್ಟೇ ಬೆಳಕಿರಲಿ,
ದೀಪದ ಬುಡದ ಕತ್ತಲೆಯೇ ದಟ್ಟವಾದುದಲ್ಲವೇ?

Monday, February 24, 2014

ಆ ಭೇಟಿ

ಗುಟ್ಟುಗಳ ಭ್ರೂಣದಲಿ ಜನಿತನಾದವನೋ,
ನೀ ರಹಸ್ಯನೋ, ನಕ್ಷತ್ರಕ ನಾಯಕನೋ,
ಕೊರಗಿನ ಕಪ್ಪಿನಲಿ ಮಿಂದೆದ್ದ ರಕ್ಕಸನೋ,
ಜಗ ಜರೆದ ಭಾಗ್ಯದಲಿ ರಹಸ್ಯನಾದವನೋ.

ಜನುಮದಾತನಿಗೂ ಬೇಡದ ಅನಾಥನಾಗಿ,
ಪಾಪಪ್ರಜ್ಞೆಯ ಛಾಯೆಯಲಿ ಬಲಿಷ್ಠನಾಗಿ,
ಅಂತರಾಳದ ಗ್ರಹಣವೇ ನೀನಾಗಿ, ಗಹಗಹಿಸಿದಂತೆ,
ಕರಾಳತೆಯ ಒಂದು ಮುಖ ನಿನ್ನದು, ಪ್ರತಿಬಿಂಬದಂತೆ.

ಎಲ್ಲ ಮನಸಲೂ ಅವಿತಿರುವ ಚೋರ,
ಎಲ್ಲ ಮನಸುಗಳನೂ ಆವರಿಸಿರುವ ಪೋರ,
ಸಮಯ ಸಾಧಕನಾಗಿ ಕುಳಿತಿರುವ ಕ್ರೂರ,
ನಿನ್ನ ಭೇಟಿಯು ಬೇಡ, ನೀನಿರು ದೂರ.

ಆ ನಿನ್ನ ಭೇಟಿಯನು ತಡೆಯುವೆವು, ಮುಂದೂಡುವೆವು,
ಆರ್ತವಾಗಿ ಮೊರೆ ಹೋಗುವೆವು, ದೇವರಿಗೋ ಮಾಯೆಗೋ,
ಆದರೆ ನೀ ಹುಣ್ಣಿನಂತೆ, ನೆತ್ತರಿಲ್ಲ ಬರಿಯ ಕೀವು,
ಜಗಕೆ ಕಾಣುವುದಿಲ್ಲ ಮನದ ಅಸಾಧ್ಯ ನೋವು.

ನಿಜ, ಆ ಭೇಟಿಯಾಗಲೇ ಬೇಕು,
ನೀನು ನಾನು ಮುಖಾಮುಖಿಯಾಗಲೇ ಬೇಕು,
ಧೈರ್ಯದ ಹೊನಲಿನಲಿ, ಕ್ಷಮೆಯ ಶರಧಿಯಲಿ,
ನನ್ನ ಕರಾಳ ಪ್ರತಿಬಿಂಬವ ತೊಳೆಯಲೇಬೇಕು.

ಮರೆತೆ ನಾನು, ಆ ಭೇಟಿಯು ಕೊಡಲಿಯೆಂದು,
ಮನಡೊಳು ಹಬ್ಬಿದ ಕೊರಗು ಬಳ್ಳಿಯ ಮೃತ್ಯುವೆಂದು,
ನಿನ್ನ ದಶಾನನ ರಾಜ್ಯದ ಮುಕ್ತಿಯೊಳಿಂದು,
ನಿನ್ನಾಟದ ಪರದೆಯ ಎಳೆದೆನು - ಹೊಸ ಗುಟ್ಟಿಗಾಗಿ,
ಹೊಸತೊಂದು ರಹಸ್ಯವಾಗಿ, ನೀ ಮತ್ತೆ ಹುಟ್ಟಲೆಂದು.