Monday, January 13, 2020

ಪುನರ್ಮಿಲನ

ನಿನ್ನ ಭೇಟಿಯ ಹೊಸತಿನಲ್ಲಿ ಚಿಮ್ಮಿದೆ ಉತ್ಸಾಹ,
ಎಷ್ಟು ಬೆರೆತರೂ, ಹರಟೆ ಹೊಡೆದರೂ ತೀರದ ದಾಹ,
ನನಗೆ ನೀನು, ನಿನಗೆ ನಾನು, ಮೋಹ ಪರಸ್ಪರ,
ನವನವೀನ ಮಜಲುಗಳ ಅನ್ವೇಷಣೆ, ಸಂಬಂಧ ಸಾರ.

ಆನಂದದ ಉನ್ಮಾದಕೆ ಕಾರಣವಾಗಿದೆ ಸಖ್ಯ,
ಪರಸ್ಪರ ಆಸರೆ ಇಲ್ಲದಿರೆ ಜೀವನ ಅಶಕ್ಯ.
ಒಬ್ಬರಿಗೊಬ್ಬರು ಪೂರಕ, ಅಪೂರ್ವ ಸಂಗಮ,
ಒಬ್ಬರಿಂದ ಇನ್ನೊಬರಾಗಿ ಪರಿಪೂರ್ಣತೆಯ ಜನುಮ.

ಸಾರ್ಥಕತೆಯ ಭಾವವು ಶಿಖರವೇರಿ ನಿಂತಿದೆ,
ಎಷ್ಟು ದಿನದ ಜಾತ್ರೆಯಿದೋ ಎಂದು ಮನವು ಅದುರಿದೆ,
ಎಣಿಕೆಯ ತಪ್ಪದೆ ಕವಲುದಾರಿ ಬಂದಿದೆ,
ಬೇರ್ಪಡೆಯೇ ಅಂತಿಮವೆಂದು ನಿರ್ಧಾರವಾಗಿದೆ.

ನನಗಾದರೆ ಧರ್ಮದ ಹೊರೆಯು, ಜಗನಿಯಮದ ಕಾವಲು,
ನಿನಗೇನಿತ್ತು ಕಾರಣ ಸಂಬಂಧವ ಮುರಿಯಲು?
ಸಮಯದ ಅಭಾವದಲಿ ವಿರಹದ ಮುನ್ನುಡಿ,
ನಿನ್ನ ಬಿಟ್ಟು ಇರಬಲ್ಲೆ - ಅರಿವಾಯಿತೆ ಜಾಣ್ಣುಡಿ.

ನಾನೇನೋ ಹರಿವ ನದಿಯಂತಿರುವೆ, ನಿಲ್ಲಲಾರೆ,
ಬಾ ಎಂದು ಕರೆದವರೊಡನೆ ಹೋಗದೆ ಇರಲಾರೆ,
ನಿನ್ನ ಧರ್ಮದ ಅರ್ಥ ನನಗೆ ತಿಳಿಯದು,
ನನಗಾರ ಅನಿವಾರ್ಯತೆಯಿಲ್ಲ, ನಿನಗೆ ತಿಳಿಯದು.

ಧರ್ಮವೋ, ನೆಪವೋ, ವಸ್ತುಸ್ಥಿತಿಯೋ, ಆಲಸ್ಯವೋ,
ಕಾಲಚಕ್ರದ ಹೊಡೆತಕೆ ಎಲ್ಲ ನೆಪವೂ ಮಾಯವೋ,
ನೀ ಬೇರೆ ಹೋದ ಮೇಲೆ ಏನಾಯಿತೋ ತಿಳಿಯದು,
ನಿನ್ನ ಬೇರೆಯವರ ಜೋಡಿ ನೋಡಿ ವೇದನೆಯೇ ಮುಗಿಯದು.

ಧರ್ಮವೂ ಅಲ್ಲ, ನಿಯಮವೂ ಅಲ್ಲ,
ಅರಿವಾಯಿತೆನಗೆ ನನ್ನ ಆಲಸ್ಯವೇ ಇದೆಲ್ಲ,
ನೀ ಎಷ್ಟಾದರೂ - ಪದ, ನುಡಿ, ಭಾಷೆ,
ನಿನಗಾರೂ ಅನಿವಾರ್ಯವಲ್ಲ, ಅದೇ ತಮಾಷೆ.

ಈ ಅರಿವಿನಲ್ಲಾಯಿತು ಮತ್ತೊಮ್ಮೆ ಅನ್ವೇಷಣೆ,
ಮತ್ತೆ ಚಿಮ್ಮಿದ ಉತ್ಸಾಹ, ತೀರದ ದಾಹ,
ಮತ್ತೆ ಪರಸ್ಪರ ಮೋಹದಿಂದ ಸಂಬಂಧ ಶುರುವಾಯಿತು,
ಪುನರ್ಮಿಲನಕೆ ಸಾಕ್ಷಿಯಾಗಿ ಈ ಕವಿತೆ ಹುಟ್ಟಿತು.