ಎಲ್ಲೋ ಹೋಗಬೇಕಾಗಿತ್ತು ಎಂದು ಹೊರಟವನು ನಡೆಯುತ್ತಾ ಜೋರಾಗಿ ಉಸಿರೆಳೆದುಕೊಂಡೆ, ಹಾಗೆಯೇ ನಿಂತುಬಿಟ್ಟೆ. ಅದೇನು ಪರಿಮಳ!!! ಎಲ್ಲಿಂದಲೋ ಬಂದ ಗಾಳಿಯಲ್ಲಿ ತೇಲಿ ಬಂದು ನನ್ನನ್ನು ಒಂದು ಕ್ಷಣ ದಿಙ್ಮೂಧನನ್ನಾಗಿಸಿತು. ಮೆಣಸಿನಕಾಯಿ ಬಜ್ಜಿ ಮಾಡಿದರೆ ಮೋಡಿಯಾಗುವುದೆಂದು ನನಗೆ ಗೊತ್ತು. ಆದರೂ ಅದೇನೋ ವಿಚಿತ್ರ ಮಾಯೆಯಂತೆ ಪರಿಮಳ ಬರುವುದೆಂದು ನನಗೆ ಅಂದೇ ತಿಳಿದಿದ್ದು. ದಿನವೂ ಅದೇ ಹಾದಿಯಲ್ಲಿ ನಡೆದು ಹೋಗುವಾಗ ಅದೇ ಅಂಗಡಿಯವನು ಮುಗುಳ್ನಕ್ಕು ನನ್ನನ್ನು ಸನ್ನೆಯಿಂದಲೇ ಆಮಂತ್ರಿಸಿದಾಗ ಅದೇನು ವಿಶೇಷವಲ್ಲ ಎಂಬಂತೆ ನಡೆದು ಹೋಗುತ್ತಿದ್ದೆ. ಆದರೆ ಇಂದೇನೋ ವಿಶೇಷ.
ಮೆಣಸಿನಕಾಯಿಯನ್ನು ಕತ್ತರಿಸಿದಾಗ ಬರುವ ಘಾಟು ಕಡಲೆಹಿಟ್ಟಿನ ಮಿಶ್ರಣದ ಹಸಿ ವಾಸನೆಯನ್ನು ಹೊಕ್ಕಾಗ ಅದೇನು ರಾಸಾಯನಿಕ ಕ್ರಿಯೆಯಾಗುವುದೋ? ಮಿಶ್ರಣದಲ್ಲಿಯ ಅಕ್ಕಿಹಿಟ್ಟು, ಅಜವಾನ ತಮ್ಮದೇ ಛಾಪನ್ನು ಉಳಿಸಿಕೊಳ್ಳಲು ಹೆಣಗುತ್ತಾ ಕೊನೆಗೆ ತಮ್ಮತನವನ್ನು ಅದೇ ರಾಸಾಯನಿಕ ಕ್ರಿಯೆಗೆ ಧಾರೆಯೆರೆಯುವುದೋ ಎನೋ? ಹಿಟ್ಟಿನಲ್ಲಿ ಅದ್ದಿದ ಮೆಣಸಿನಕಾಯಿ ಬಿಸಿಯಾದ ಎಣ್ಣೆಯಲ್ಲಿ ಬಿದ್ದೊಡನೆ ಅದಾವ ಮಾಯೆಯಾಗುವುದೋ? ಅ ಮಾಯಾ ಸುಗಂಧವೇ ಗಾಳಿಯಲ್ಲಿ ಪಸರಿಸಿ ಜೀವಾಳವಾದ ಉಸಿರಿನೊಡನೆ ಬೆರೆತು ಮೂಗಿನ ಕಣಕಣವನ್ನು ತೋಯಿಸುತ್ತಾ ಪುಪ್ಪುಸದ ಮಾರ್ಗವಾಗಿ ರಕ್ತನಾಳಗಳಲ್ಲಿ ಹರಿಯುತ್ತಾ ಹೃದಯವನು ಮುಟ್ಟಿದೊಡೆ 'ಆಹಾ' ಎಂಬ ಉದ್ಗಾರ ಬರುವಂತಾಗುವುದು.
ಬಹುಷಃ ಜಗತ್ತಿನ ಕೆಲವೇ ವಸ್ತುಗಳಲ್ಲಿ ಅಥವ ವಿಷಯಗಳಲ್ಲಿ ಈ ತರಹದ ಮಾಯಾ ಸೆಳೆತವಿರಿತ್ತದೇನೋ. ಆ ದಿನ ರಾಜಣ್ಣ ಹಾಕುತ್ತಿದ್ದ ಮೆಣಸಿನಕಾಯಿ ಬಜ್ಜಿಯೂ ಒಂದಿರಬಹುದು. ನೋಡುತ್ತಿದ್ದಂತೆ ಬಾಯಲ್ಲಿ ಹಾಕಬೇಕೆಂಬ ಉತ್ಕಟ ವಾಂಛೆಯಲ್ಲಿ ಒಂದೆರೆಡು ಕ್ಷಣ ಅಲ್ಲಿಯೇ ನಿಂತೆ. ಅದನ್ನು ನೋಡಿ ರಾಜಣ್ಣ ಕೇಳಿದ, "ಏನಾಯ್ತು ಸ್ವಾಮಿ. ಬನ್ನಿ ಬಿಸಿ ಬಿಸಿ ಬಜ್ಜಿ ರುಚಿ ನೋಡಿ" ಎಂದು ಕೂಗಿ ಕರೆದ. ತಕ್ಷಣ ಜ್ಞಾಪಕಕ್ಕೆ ಬಂದಿತು - ಅಂದು ನನ್ನ ಉಪವಾಸ. ಏನನ್ನೂ ತಿನ್ನುವ ಹಾಗಿಲ್ಲ. ಒಪ್ಪವಾಗಿ ಜೋಡಿಸಿದ ಮೆಣಸಿನಕಾಯಿಯು ನನ್ನನ್ನು ಅಣಕಿಸುತಲಿತ್ತು. ಆದರೆ ಆ ದಿನ ಸುವಾಸನೆಯ ಮೂಲಕ ಮನಸ್ಸಿಗಾದ ಆಹ್ಲಾದದಲಿ ನಾಲಿಗೆಯ ದುರ್ದೈವಕ್ಕೆ ದುಃಖವಾಗಲಿಲ್ಲ.
ಮರುದಿನ ಅದೇ ಬಜ್ಜಿಯನ್ನು ತಿನ್ನಲೆಂದೇ ರಾಜಣ್ಣನ ಅಂಗಡಿಗೆ ಹೋದರೂ ಆ ಸೆಳೆತವಿರಲಿಲ್ಲ. ಬಂದ ಕಾರಣಕ್ಕಾಗಿ ಬಜ್ಜಿಯನ್ನು ಮನೆಗೆ ತೆರಳಿದರೂ ಆ ಉಲ್ಲಾಸವಾಗಲೀ ಆನಂದವಾಗಲೀ ಇರಲಿಲ್ಲ. ಕಾರಣಕ್ಕಾಗಿ ಹುಡುಕುವ ವ್ಯವಧಾನವೂ ಇರಲಿಲ್ಲ.
*********************************************************************************
ನಾವು ಸೈನಿಕ ಶಾಲೆಯಲ್ಲಿದ್ದಾಗ ಶೈಕ್ಷಣಿಕ ಪ್ರವಾಸಕ್ಕೆಂದು ಹೈದರಾಬಾದಿಗೆ ಹೊರಟಿದ್ದೆವು. ಶಾಲೆಯಲ್ಲಿನ ದಿನಚರಿ ಹಾಗೂ ಅನುಶಾಸನದಿಂದ ಪ್ರತಿಯೊಂದು ಕ್ರಿಯೆಯೂ ಹೊತ್ತಿಗೆ ಸರಿಯಾಗಿ ನಡೆಯುತ್ತಿತ್ತು. ಎಷ್ಟೆಂದರೆ ನಮ್ಮ ಹಸಿವು ನಿದ್ಡೆಯ ಆಧಾರದ ಮೇಲೆ ನಾವು ಸಮಯವನ್ನು ಅಂದಾಜಿಸುವಷ್ಟು ನಮ್ಮ ಕ್ರಿಯೆಗಳು ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದವು. ಏರುಪೇರಾದರೆ ಮನಸ್ಸೆಲ್ಲಾ ವ್ಯಗ್ರವಾಗುವಷ್ಟು ನಾವು ದಿನಚರಿಗೆ ಒಗ್ಗಿಹೋಗಿದ್ದೆವು. ನಾವು ಶಾಲೆಯಿಂದ ಬಿಟ್ಟಾಗ 6ಗಂಟೆಯಾಗಿತ್ತು. ಬಿಜಾಪುರದಿಂದ ಸಿಂದಗಿ ಮಾರ್ಗವಾಗಿ ಕಲಬುರಗಿ ಮುಟ್ಟುವುದೆಂದು ತೀರ್ಮಾನವಾಗಿತ್ತು. 15 ವರ್ಷಗಳ ಹಿಂದೆ ಬಿಜಾಪುರದಿಂದ ಸಿಂದಗಿ ಮಾರ್ಗವೆಂದರೆ ಅಂಜಿಕೆಯಾಗುವಷ್ಟು ಕಳಪೆಯಾಗಿತ್ತು. ಬಸಿರಾಗಿದ್ದರೆ ಗರ್ಭಪಾತ ಶತಃಸಿದ್ಧ. 60 ಕಿಲೋಮೀಟರ್ ದೂರ ಕ್ರಮಿಸಲು ಎರಡೂವರೆ ಗಂಟೆಗಳು ಬೇಕಾದವು.
ಸಿಂದಗಿಯಲ್ಲಿ ಶಾಲೆಯಿಂದ ಕಟ್ಟಿಕೊಂಡು ಬಂದಿದ್ದ ಉಪಹಾರವಾಯಿತು. ಅಲ್ಲಿಯವರೆಗೂ ವೇಳಾಪಟ್ಟಿ ಸರಿಯಾಗಿತ್ತು. ನಾವೂ ಹುಮ್ಮಸ್ಸಿನಿಂದ ಹಾಡುಗಳನ್ನು ಕೇಳುತ್ತಾ, ಹಾಡುತ್ತಾ, ಹರಟುತ್ತಾ ಸಾಗಿದ್ದೆವು. ಕಲಬುರಗಿಯಲ್ಲಿ ಖಾಜಾ ಬಂದೇನವಾಜರಿಗೆ ಪ್ರಣಾಮಿಸಿ ಮುಂದೆ ಸಾಗಿದೆವು. ಆದರೆ ರಸ್ತೆಯ ವರದಿಂದ ಕಲಬುರಗಿ ಮುಟ್ಟುವ ಹೊತ್ತಿಗಾಗಲೇ ನಮ್ಮ ಊಟದ ಸಮಯವಾಗಿತ್ತು. ನಾವು ಇದ್ದವರು 40 ಜನ. ಎಲ್ಲರೂ ಒಟ್ಟಿಗೇ ಕುಳಿತು ಊಟಮಾಡುವಷ್ಟು ಜಾಗವಿರುವ ಹೋಟೆಲ್ಗಾಗಿ ನಮ್ಮ ಹುಡುಕಾಟ ಸಾಗಿತ್ತು. ಕಲಬುರಗಿ ದಾಟಿ 60 ಕಿಲೋಮೀಟರ್ ಬಂದಾಗಿತ್ತು. ನಮ್ಮ ಹೊಟ್ಟೆಯಲ್ಲಿ ತಳಮಳ ಶುರುವಾಗಿತ್ತು. ಬೆಳೆಯುವ ವಯಸ್ಸು, ಶಿಸ್ತಿನ ಜೀವನ, ಹಸಿಯುವ ಹೊಟ್ಟೆ, ನಿರಾಶಾಜನಕ ಹೋಟೆಲ್ಲುಗಳು - ಇದರ ನಡುವೆ ಪಯಣವೂ ರೋಸಿದಂತಿತ್ತು.
ಮುಂದೊಂದು ಧಾಬಾ, ಮತ್ತೊಂದು ಹೋಟೆಲ್ ಎನ್ನುತ್ತಾ ಸಮಯವು 3ರ ಸುಮಾರಾಗಿತ್ತು. ಬಿಟ್ಟರೆ ಕಟ್ಟಿಗೆಯ ತುಂಡನ್ನೂ ಕಡಿದು ತಿನ್ನುವಷ್ಟು ಹಸಿವು. ನಿದ್ದೆಯೂ ಬರದಷ್ಟು ಹಸಿವು. ಆದರೆ ಹೆದ್ದಾರಿ ಮಾತ್ರ ಮಧ್ಯಾಹ್ನದ ಸೂರ್ಯನಿಗೆ ಹೆದರಿ ಮಲಗಿಕೊಂಡಂತೆ ಬಿದ್ದುಕೊಂಡಿತ್ತು. ಇನ್ನೇನು ತಡೆದುಕೊಳ್ಳಲು ಸಾಧ್ಯವೇ ಇಲ್ಲವೆನ್ನುವಾಗ ಒಂದು ಧಾಬಾ ಕಾಣಿಸಿತು. ಆದರೆ ಒಮ್ಮೆಗೇ 20 ಮಂದಿ ಮಾತ್ರ ಕೂಡುವಷ್ಟು ಜಾಗವಿತ್ತು. ಇನ್ನೂ ಹುಡುಕುವ ತಾಳ್ಮೆಯಾಗಲೀ, ಮುಂದೆ ಊಟ ಸಿಗುವ ನಂಬಿಕೆಯಾಗಲೀ ಇರಲಿಲ್ಲ. ಹಾಗಾಗಿ ಅಲ್ಲೇ ಊಟ ಮಾಡುವುದೆಂದು ನಿಶ್ಚಯವಾಯಿತು. ಅರ್ಧ ಮಂದಿ ಉಣ್ಣುವ ತನಕ ಮಿಕ್ಕವರು ತಪಸ್ಸು ಮಾಡುವಂತಾಗಿದ್ದರೂ ಸರಿಯೇ. ಬೇರೆ ದಾರೆಯೇ ಇಲ್ಲ.
ಆ ದಿನ ಆ ಧಾಬಾದಲ್ಲಿದ್ದ ಪ್ರತಿಯೊಬ್ಬ ಬಾಣಸಿಗನಲ್ಲೂ ಅನ್ನಪೂರ್ಣೇಶ್ವರಿಯ ಕೃಪಾಕಟಾಕ್ಷವಿದ್ದಂತಿತ್ತು. ಉಂಡವರಿಗೆ ಅಮೃತಪಾನ ಮಾಡಿದಷ್ಟು ಸಂತೋಷ. ಎಷ್ಟು ತಿಂದರೂ ತೃಪ್ತಿಯೇ ಇಲ್ಲದಂತೆ ತಿಂದೆವು. ಜೀವನವೇ ಮುಗಿಯಿತೆಂಬಂತೆ ತಿಂದೆವು. ಜೀವನಕ್ಕಾಗಿ, ಹೊಟ್ಟೆಯಲ್ಲಿನ ಬ್ರಹ್ಮನ ತೃಪ್ತಿಗಾಗಿ ತಿಂದೆವು. ಹೊಸದಾಗಿದ್ದ ಖಾದ್ಯಗಳೇನೂ ಇರಲಿಲ್ಲ - ಅದೇ ದಾಲ್, ರೋಟಿ, ಅಂಡಾ ಬುರ್ಜಿ, ಜೀರಾ ರೈಸ್ ಮುಂತಾದವು. ಆದರೆ ಅವು ಅಷ್ಟು ರುಚಿಕಟ್ಟಾಗಿರುವುದೆಂದು ನಾವು ಎಣಿಸಿರಲಿಲ್ಲ.
ಆ ಒಗ್ಗರಣೆಯಲ್ಲಿನ ಜೀರಿಗೆಯ ಘಮ, ತಂದೂರಿಯಲ್ಲಿ ರೊಟ್ಟಿ ಬೇಯುವ ವಾಸನೆ, ಅನ್ನ ಬೇಯುವಾಗ ಬರುವ ನೀರಿನ ಸದ್ದು ಹಾಗೂ ವಾಸನೆ, ತಾಳವೆಂಬಂತೆ ಬಾಣಲಿಗೆ ಸೌಟಿನಿಂದ ಬಾಣಸಿಗರು ಬಡಿಯುವ ಸದ್ದು ಇವೆಲ್ಲಾವೂ ಸೇರಿ ಸ್ವರ್ಗವೇ ಅದೇನೋ ಎಂಬ ವಾತಾವರಣ ನಿರ್ಮಾಣವಾಗಿತ್ತು. ಊಟ ಮುಗಿಸಿದವರೆಲ್ಲರ ಮುಖದಲ್ಲೂ ಅದೆನೋ ಸಂತೋಷ, ಪ್ರಸನ್ನತಾ ಭಾವ ಹಾಗು ತೃಪ್ತಿ. ಈಗಲೂ ನಾನು ಹೇಳುವುದು ಅದನ್ನೇ - ನಾನಂದು ಅಮೃತಪಾನವನ್ನೇ ಮಾಡಿದ್ದು.
ಮತ್ತೊಂದು ಸಲ ಆ ಧಾಬಾಕ್ಕೆ ಹೋಗಲು ಅವಕಾಶ ದೊರೆಯಲಿಲ್ಲ. ಹೋದರೂ ಅದೇ ತೃಪ್ತಿ ದೊರೆಯುತ್ತಿತ್ತೆಂಬ ನಂಬಿಕೆಯಾಗಲೀ ಎಣಿಕೆಯಾಗಲೀ ನನಗಿಲ್ಲ.

ನಾನಾಗ ಮುಂಬೈಯಲ್ಲಿ ಕೆಲಸಮಾಡುತಿದ್ದೆ. ಮೊದಲನೆಯ ನೌಕರಿಯೆಂಬ ಹುಮ್ಮಸ್ಸು, ಏನನ್ನಾದರೂ ಸಾಧಿಸಬಲ್ಲೆನೆಂಬ ಛಲ, ಯೌವನದ ಉತ್ಸಾಹ ಹಾಗೂ ವಿದ್ಯಾವಂತನಿಗಿರುವ ಆತ್ಮವಿಶ್ವಾಸ - ಎಲ್ಲವನ್ನೂ ಕಳೆದುಕೊಂಡು ಒಂದು ರೀತಿಯ ಕಳಾಹೀನ ಬದುಕನ್ನು ಸಾಗಿಸುತ್ತಲಿದ್ದೆ. ಜೀವನದಲ್ಲಿ ಒಂದು ಮಹಾ ಜಿಗುಪ್ಸೆ ಮೂಡಿ "ಸಾಕಪ್ಪಾ!! ಓಡಿ ಹೋಗೋಣ" ಎಂದೂ ಅನಿಸುತಿತ್ತು.
ಅಗತ್ಯಕ್ಕಿಂತಾ ಹೆಚ್ಚಿನ ಸಂಬಳವಿತ್ತು, ಜವಾಬ್ದಾರಿಯಾಗಿ ಹೆಚ್ಚಿನದೇನೂ ಇರಲಿಲ್ಲ, ಆದರೂ ಭ್ರಮನಿರಸನವಾದ ಅನುಭವ. ಮುಂಬೈ ಎಲ್ಲಾ ಸುತ್ತಾಡಿದರೂ, ಸಮುದ್ರವನ್ನೇ ದಿಟ್ಟಿಸುತಾ ಎಷ್ಟು ಹೊತ್ತು ಕುಳಿತರೂ, ಆ ಕ್ಷಣದಲಿ ನೆಮ್ಮದಿ ದೊರೆತರೂ, ಮರುಕ್ಷಣದಲಿ ಮತ್ತದೇ ದುಗುಡ ತಳಮಳ.
ಒಂದು ಶನಿವಾರ ಸಂಜೆ ಕೆಲಸವಾದ ಮೇಲೆ ನನ್ನ ಗೆಳೆಯರಿಗೆ ಫೋನಾಯಿಸಿದೆ. ಅವರೆಲ್ಲರೂ ಮನೆಯಲ್ಲಿ ಊಟ ಮಾಡದೇ ಹೊರಗೆ ಹೋಗುತ್ತಿರುವ ವಿಷಯ ತಿಳಿದು ಆಫೀಸಿನ ಸಮೀಪವೇ ಇದ್ದ ಹೋಟೆಲ್ಲಿಗೆ ಹೋದೆ. ನಿಜ ಹೇಳಬೇಕೆಂದರೆ, ಅದು ಯಾವುದೋ ಹೋಟೆಲ್ ಅಲ್ಲ. ಆ ಹೋಟೆಲಿನಲ್ಲಿಯೇ ಸಿಹಿತಿಂಡಿಗಳ ವಿಭಾಗವಿತ್ತು. ದಿನವೂ ಆಫೀಸಿಗೆ ಹೋಗುವಾಗ ಅದರ ಮುಂದಿನಿಂದಲೇ ಓಡಾಡುತ್ತಿದ್ದೆ. ಸಕಲ ಸಿಹಿತಿಂಡಿಗಳ ಮಿಶ್ರ ಪರಿಮಳ ಮನಸ್ಸಿನಲ್ಲಿ ಸಾವಿರ ಆಸೆಗಳನ್ನು ಹುಟ್ಟು ಹಾಕುತಿತ್ತು. ಕಾಜೂ ಬರ್ಫಿ, ಬಾದಾಮ್ ಬರ್ಫಿ, ಕಾಜೂ ಕಟ್ಲಿ, ಅಂಜೂರ ಸ್ಯಾಂಡ್ವಿಚ್ ಅಲ್ಲದೇ ಹೆಸರೇ ಕೇಳಿರದಿದ್ದ ಅದೆಷ್ಟೋ ಸಿಹಿತಿಂಡಿಗಳು. ನೋಡಲು ಕಣ್ಣಿಗೂ ಹಬ್ಬ, ಮೂಗಿಗೂ ಹಬ್ಬ. ಸಾವಿರ ಹೊಟ್ಟೆಗಳಿರಬಾರದೇ ಎನ್ನುವ ದುರಾಸೆಯೂ ಇತ್ತು.
ಮನೆಯಲ್ಲಿ ಗೆಳೆಯರಿಲ್ಲದ ನೆಪದಲ್ಲಿ ಹೋಟೆಲ್ಲಿಗೆ ಹೋದರೆ ಒಂದು ಪರಮಾಶ್ಚರ್ಯ. ಅಲ್ಲಿ ಯಾವುದೇ ಅಡಿಗೆಗೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಳಸುವುದಿಲ್ಲವೆಂದು ತಿಳಿಯಿತು. ಆದರೆ ಪಾವ್ ಭಾಜಿಯಿಂದ ಪಿಜ್ಜಾದವರೆಗೆ ಎಲ್ಲವೂ ಸಿಗುತ್ತದೆ. ಬಹುಮಹಡಿ ಕಟ್ಟಡದ ಮೇಲಿದ್ದ ಆಸೆ ಒಮ್ಮೆಲೇ ನೆಲಕ್ಕೆ ಬಡಿದಪ್ಪಳಿಸಿತು. ಈರುಳ್ಳಿ ಇಲ್ಲದ ಬಿರಿಯಾನಿ, ಬೆಳ್ಳುಳ್ಳಿಯಿಲ್ಲದ ದಾಲ್ ಫ್ರೈಯನ್ನು ಕಲ್ಪಿಸಿಕೊಳ್ಳುವುದು ಹೇಗೆ ಮಾರಾಯ? ಆದರೂ ಬಂದಿದ್ದು ಆಯಿತು, ಏನಾದರೂ ತಿನ್ನೋಣವೆಂದು ಮನಸ್ಸಿಗೆ ತೋಚಿದ ಐಟಂಗಳನ್ನು ಹೇಳಿದೆ.
ಮೊದಲಿಗೆ ಬಂದ ಮಸಾಲಾ ಪಾಪಡ್ ಆಸೆಯನ್ನು ಚೇತರಿಸಿಕೊಳ್ಳುವಂತೆ ಮಾಡಿತು. ಅಗಲವಾದ ದುಂಡನೆಯ ಉದ್ದಿನ ಹಪ್ಪಳದ ಮೇಲೆ ಹದವಾಗಿ ಹೆಚ್ಚಿದ ಸೌತೆಕಾಯಿ, ಟೊಮ್ಯಾಟೋ ಹಾಗೂ ಹೆರೆದ ವಾಸನೆ ತೆಗೆದ ಎಲೆಕೋಸಿಗೆ ಸ್ವಲ್ಪ ಖಾರದಪುಡಿ, ಚಾಟ್ ಮಸಾಲ, ಉಪ್ಪು ಹಾಗೂ ಗರಂ ಮಸಾಲ ಎಲ್ಲವೂ ಸೇರಿ ಅಸಾಮಾನ್ಯ ರುಚಿಯನ್ನು ಕಟ್ಟಿಕೊಟ್ಟಿದ್ದವು. ನೆಚ್ಚಿನ ಈರುಳ್ಳಿಯನ್ನು ಸೌತೆಕಾಯಿ ಇಷ್ಟು ಸುಲಭವಾಗಿ ಮರೆಸಬಿಡುವುದೆಂದು ನಾನು ಎಣಿಸಿರಲಿಲ್ಲ. ಬಹುಷಃ ಏನೂ ಎಣಿಕೆಗಳಿರಲಿಲ್ಲವೆಂದೇ ಸಾಮಾನ್ಯ ಖಾದ್ಯಗಳೂ ಸಹ ಅಸಾಮಾನ್ಯಾವೆನಿಸಿದ್ದವು.
ಸಾರ್ವಜನಿಕ ಸ್ಥಳಗಳಲ್ಲಿ ಬೆರಳು ಚೀಪುತ್ತಾ ಕೂಡುವುದು ಸಹ್ಯವಲ್ಲದಿದ್ದರೂ ಊಟವಾದಮೇಲೆ ನಾನು ಮಾಡಿದ್ದು ಅದೇ. ಅತಿಶಯೋಕ್ತಿಯೆನಿಸಿದರೂ ಅದು ನಿಜವೇ. ಮನಃಪೂರ್ತಿಯಾಗಿ ಆಹಾರದ ಸವಿಯುಂಡ ದಿನಗಳಲ್ಲಿ ಆ ದಿನವೂ ನೆನಪಿನ ಗೋಡೆಯ ಮೇಲೆ ಫ್ರೇಮ್ ಹಾಕಿಟ್ಟಿದ್ದೇನೆ.
ಅದಾದ ಮೇಲೆ ಎಷ್ಟೋ ಬಾರಿ ಆ ಹೋಟೆಲ್ಲಿಗೆ ಹೋಗಿದ್ದಿದೆ. ಆದರೆ ಎಂದೂ ನಿರಾಶನಾಗಿ ಬಂದಿದ್ದಿಲ್ಲ. ಪ್ರತಿ ಬಾರಿಯೂ ಹೋದಾಗ ಒಂದು ಹೊಸತನ್ನು ಸವಿದು ಉಲ್ಲಸಿತನಾಗಿ ಹೊರಬರುತ್ತಿದ್ದೆ. ಬಹುಷಃ ಈರುಳ್ಳಿಯಿಲ್ಲದೇ ಅಡಿಗೆಯಿಲ್ಲವೆಂಬ ನನ್ನ ಬಲವಾದ ನಂಬಿಕೆಯನ್ನು ಅಲ್ಲಾಡಿಸಿದರಿಂದ ಆ 'ಸಾತ್ವಿಕ' ಆಹಾರವನ್ನು ಮತ್ತೆ ಮತ್ತೆ ಮೆದ್ದು ಉಲ್ಲಸಿತನಾಗುತ್ತೆದ್ದೆನೇನೋ.

ಈ ಹೋಟೆಲಿನ ಕಥೆಯಾಗಿ ಸುಮಾರು ಒಂದು ವರ್ಷದ ಮೇಲಾಗಿತ್ತು. ಕೆಲಸದಲ್ಲೂ ನೆಮ್ಮದಿಯಿತ್ತು. ಕಳೆದುಹೋದ ಆತ್ಮವಿಶ್ವಾಸ ಮೂಡಿ, ಜಿಗುಪ್ಸೆ ದೂರವಾಗಿ ಮತ್ತೊಮ್ಮೆ ಉತ್ಸಾಹದಲ್ಲಿ ತೇಲುತ್ತಲಿದ್ದೆ. ಜೀವನದಲ್ಲಿಯ ಬಹಳಷ್ಟು ಮಧುರ ಕ್ಷಣಗಳನ್ನು ನಾನು ಈ ಒಂದು ವರ್ಷದ ಪಯಣದಲ್ಲಿ ಕಂಡಿದ್ದೇನೆ. ವಿಶ್ವಾಸ ಮರುಕಳಿಸಿದ ಕ್ಷಣಗಳು, ಜಿಗುಪ್ಸೆ ಕರಗಿದ ಕ್ಷಣಗಳು ಅದಕ್ಕೆ ಕಾರಣವಾದ ನನ್ನ ಕಛೇರಿಯ ಗೆಳೆಯರು, ಅವರೊಂದಿಗಿನ ಒಡನಾಟದಲ್ಲಿ ಕಂಡ ಜೀವನ ದರ್ಶನ ನನ್ನಲ್ಲಿ ಹೊಸ ಮನುಷ್ಯನನ್ನು ಹುಟ್ಟು ಹಾಕಿದ್ದವು. ಜೀವನದ ನೆಮ್ಮದಿಯ ಸೆಲೆ ಕಂಡುಕೊಂಡ ದಿನಗಳವು.
ಒಂದು ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ನನ್ನ ಜೊತೆ ವಾಸವಿದ್ದ ಗೆಳೆಯ ಕಾಫಿ ಕುಡಿಯಲು ಹೋಗೋಣವೆಂದು ಒತ್ತಾಯಿಸಿದ. ಗಂಟೆ 9 ಆಗಿದೆ, ಈಗೆತ್ತಲಿನ ಕಾಫಿಯೆಂದರೂ ಕೇಳದೆ ಪಕ್ಕದಲ್ಲೇ ಕೆಫೆ ಕಾಫಿ ಡೇಗೆ ಕರೆದೊಯ್ದು ಕಾಫಿಯನ್ನು ಕುಡಿದೆವು. ಊಟವನ್ನು ಮೊದಲೇ ಮಾಡಿದ್ದೆವು. ಹೊಟ್ಟೆ ಆಗಲೇ ಬಿರಿದುಕೊಳ್ಳುತ್ತಿತ್ತು ಆದರೂ ಈ ಮಹಾಶಯನಿಗೆ ಮತ್ತಷ್ಟು ತಿನ್ನಬೇಕೆಂಬ ಚಪಲ.
ಏನು ತಿನ್ನೋಣವೆಂದು ಕೇಳಿದರೆ ಅವನು ಹೇಳಿದ "ಸಿಜ್ಲಿಂಗ್ ಬ್ರೌನಿ". ಅಂದಿನವರೆಗೂ ನಾನದನ್ನು ತಿಂದಿರಲಿಲ್ಲ. ಅದರ ಹೆಸರೂ ಕೇಳಿರಲಿಲ್ಲ. ಅದೂ ಆಗಲಿ ಎಂದು ಆರ್ಡರ್ ಮಾಡಿದೆವು. ಆ ಖಾದ್ಯ ಎದುರಿಗೆ ಬಂದಾಗ ಅತ್ಯಾಶ್ಚರ್ಯ. ಹೀಗೂ ತಿನಿಸುಗಳಿರಬಹುದೆಂದು ಊಹಿಸಿಯೂ ಇರಲಿಲ್ಲ.
ಬಿಸಿಯಾದ ಕಬ್ಬಿಣದ ತಟ್ಟೆಗೆ ಸುತ್ತಲೂ ಮರದ ಚೌಕಟ್ಟು. ಆ ತಟ್ಟೆಗೆ ಮರದ ಹಿಡಿಕೆಯೂ ಇತ್ತು. ಆ ತಟ್ಟೆಯಲ್ಲಿ ಬೆಚ್ಚಗಿರುವ ಚಾಕೋಲೇಟ್ ಹಾಗೂ ಅಖರೋಟಿನಿಂದ ಮಾಡಿದ ಕೇಕ್ (ಬ್ರೌನಿ). ಆ ಕೇಕಿನ ಮೇಲೆ ಅತಿ ತಣ್ಣಗಿರುವ ವೆನಿಲ್ಲಾ ಐಸ್ ಕ್ರೀಂ. ಅದರ ಮೇಲೆ ಕುದಿಯುತ್ತಿರುವ ಚಾಕೋಲೇಟ್ ಸಾಸ್. ವೆನಿಲ್ಲಾ ಐಸ್ ಕ್ರೀಂನ ಲಘು ಸ್ವಾದ, ಚಾಕೋಲೇಟಿನ ಭರ್ಜರಿ ಫ್ಲೇವರ್, ಬಿಸಿ ತಾಕಿದ ಕಬ್ಬಿಣದ ವಾಸನೆ ಹಾಗೂ ಅದರಲ್ಲಿ ಸಾವಕಾಶವಾಗಿ ಕರಗುವ ಕೇಕ್ - ವಾಹ್!!! ಬೆಚ್ಚಗಿರುವ ಬ್ರೌನಿ, ತಣ್ಣಗಿರುವ ಐಸ್ ಕ್ರೀಂ ಮೇಲೆ ಕುದಿಯುತ್ತಿರುವ ಚಾಕೋಲೇಟ್ ಸಾಸ್ - ಇವೆಲ್ಲವೂ ಒಟ್ಟಿಗೆ ಬಾಯಲ್ಲಿ ಇಟ್ಟಾಗ ಒಮ್ಮೆಲೇ ಎಲ್ಲವೂ ಕರಗಿದಂತಾಗುವುದು. ಅಲ್ಲಲ್ಲಿ ನಾಲಿಗೆ ಸುಟ್ಟರೇ ಮರುಕ್ಷಣವೇ ಐಸ್ ಕ್ರೀಂನ ತಂಪು ಅದನ್ನು ಶಮನಗೊಳಿಸುವುದು. ನಡುವೆ ಸಿಗುವ ಅಖರೋಟಿನ ಸ್ವಾದ, ಕೇಕಿನ ಮೆದು ಎಲ್ಲವೂ ಸೇರಿ ಸ್ವರ್ಗದ ಮೇಲೆ ಮೂರಂತಸ್ತಿನ ಅರಮನೆ ಕಟ್ಟಿ ನಮ್ಮನ್ನು ಅಲ್ಲಿಗೇ ತಲುಪಿಸುವವು.
ಹೊಟ್ಟೆ ಪೂರ್ತಿ ತುಂಬಿದ ಮೇಲೂ ಮತ್ತೆ ತಿನ್ನಬೇಕು ಎಂದೆನಿಸಿ, ತಿಂದರೂ ಅಸಹ್ಯವೆನಿಸದೇ ಮಹದಾನಂದ ಕೊಡುವ ಏಕೈಕ ಪದಾರ್ಥವೆಂದರೆ ಬಹುಷಃ ಚಾಕೋಲೇಟೇ ಇರಬೇಕು. ಬೇರಾವ ಖಾದ್ಯಕ್ಕೂ ಆ ಸಾಮರ್ಥ್ಯವೇ ಇಲ್ಲ.

ನಮ್ಮ ಪೂರ್ವಿಕರು ಆಹಾರವನ್ನು ಬ್ರಹ್ಮನತ್ತ ಹೋಗುವ ಹಾದಿಗೆ ಹೋಲಿಸಿದ್ದರು. ಕೆಲವು ಕಡೆ ಬ್ರಹ್ಮನ ಸ್ವರೂಪವೇ ಎಂದೂ ಕರೆದರು. ದೇಹಕ್ಕೆ ಭೌತಿಕವಾಗಿ ದೇಹದೊಳಗಿನ ಆತ್ಮಕ್ಕೆ ಆಧ್ಯಾತ್ಮಿಕವಾಗಿ ಪೋಷಿಸುವುದು ಇದೇ ಆಹಾರ. ಆಹಾರದ ಪರಮಗುರಿಯೆಂದರೆ ಆನಂದ. ಹೊಟ್ಟೆ ಹಸಿದಾಗ ಊಟ ಮಾಡಿದರೆ ಭೌತಿಕವಾಗಿ ಹೊಟ್ಟೆ ತುಂಬುವುದು ಗೋಚರವಾದರೂ ನಮ್ಮ ಮನಸ್ಸಿಗೆ ಆಗುವ ತೃಪ್ತಿಯೇ ಆಹಾರದ ಲಕ್ಷ್ಯವಾಗಿರಬೇಕು. ಅಡಿಗೆ ಮನಸ್ಸು ತುಂಬಬೇಕು ಹೊಟ್ಟೆಯನ್ನಲ್ಲವೆಂದು ಎಲ್ಲೋ ಕೇಳಿದ ನೆನಪು. ನಾನು ಈ ಮೊದಲೇ ಹೇಳಿದ ದೃಷ್ಟಾಂತಗಳು ಹಲವು ವರ್ಷಗಳಷ್ಟು ಹಳೆಯದಾದರೂ ಮನಸ್ಸಿನಲ್ಲಿ ಅಚ್ಚಳಿಯದೇ ಇರುವುದು ಆ ಕಾರಣದಿಂದಲೇ.
ದೇಹಕ್ಕೆ ಶಕ್ತಿಯ ಸಿಂಚನವಾಗುವುದು ಆಹಾರದಿಂದಲೇ. ಹಾಗೂ ಶಕ್ತಿ ಸಂಚಯವಾಗುವ ಕಾರ್ಯಗಳ ಮೇಲೆ ನಾವು ತಿನ್ನುವ ಆಹಾರ ಪರಿಣಾಮ ಬೀರುತ್ತದೆ. ದೇಹದ ನಿರಂತರ ಚಲನೆಗೆ, ಚಾಲನೆಗೆ ಹಾಗೂ ಮನಸ್ಸಿನ ಚಿತ್ತಸ್ಥೈರ್ಯಕ್ಕೂ ಇದೇ ಆಹಾರ ಸಾಧನವಾಗುತ್ತದೆ. ಅದೇ ಆಹಾರದ ಗುಣದಿಂದ ಮನಸ್ಥಿತಿಯೂ ನಿರ್ಧಾರವಾಗುತ್ತದೆ. ಅತಿಯಾದ ಖಾರವಾದ ಆಹಾರ ವ್ಯಗ್ರತೆಯನ್ನು ಹೆಚ್ಚಿಸಿದರೆ, ಅತಿಯಾದ ಸಿಹಿ ತಳಮಳ ಹುಟ್ಟು ಹಾಕುತ್ತದೆ.
ಆದರೆ ದಿನನಿತ್ಯದಲ್ಲಿ ಆಹಾರಕ್ಕೆ ನಾವು ಕೊಡುವ ಮಹತ್ವ ಬಹಳ ಕಡಿಮೆ. ಹೊಟ್ಟೆ ತುಂಬಿದರೆ ಸಾಕು ಎಂದು ಏನನ್ನಾದರೂ, ಯಾವ ಹೊತ್ತಿನಲ್ಲಾದರೂ ಬಾಯಿಗೆ ಹಾಕುತ್ತೆಲೇ ಇರುತ್ತೇವೆ. ಆಹಾರದ ವಿಷಯದಲ್ಲಿ ಶಿಸ್ತಿರಬೇಕೆಂಬ ಕನಿಷ್ಠ ಜ್ಞಾನವನ್ನೂ ಮರೆತಿದ್ದೇವೆ. ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಬಾಯಿಯ ಕೆಲಸ ಶುರುವಾಯಿತೆಂದರೆ ಮಲಗುವವರೆಗೂ ನಡೆಯುತ್ತಲೇ ಇರುತ್ತದೆ. ಬಹುಷಃ ಅದರಿಂದಲೇ ಮಧುಮೇಹ, ಸ್ಥೂಲಕಾಯ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು 30 ವರ್ಷದೊಳಗಿನವರಿಗೂ ಕಾಡುತ್ತಿರುವುದು. ಆಹಾರದ ಶಿಸ್ತನ್ನ ಪಾಲಿಸಿಕೊಂಡು ಬಂದ ಅಜ್ಜಿ-ತಾತಂದಿರು ಮಾತ್ರ ಗಟ್ಟಿಮುಟ್ಟಾಗಿರುವುದು.
ಯಾವಾಗ ಹೊಟ್ಟೆಯ ಬದಲು ನಾಲಿಗೆಯು ಆಹಾರದ ಬೇಕು-ಬೇಡಗಳನ್ನು ನಿರ್ಧರಿಸುವುದೋ, ಅಲ್ಲಿಗೆ ನಮ್ಮಯ ಆರೋಗ್ಯದ ಅವನತಿ ಶುರುವಾಯಿತೆಂದೇ ತಿಳಿಯಬೇಕು. ನಾಲಿಗೆಯು ಇಂದಿನದಲ್ಲದೇ ನಾಳೆಯದೂ ಚಿಂತೆ ಮಾಡುತ್ತದೆ. ಆಸೆಯ ಬಲೆಯ ನೇಯ್ದು ಮನಸ್ಸನ್ನು ಬಂಧಿಸಿಡುತ್ತದೆ. ಅಂತಲೇ ಉಪವಾಸದ ನಿಯಮಗಳನ್ನು ಸಮಾಜದ ಹಾಗೂ ವ್ಯಕ್ತಿಯ ಆರೋಗ್ಯದ ದೃಷ್ಟಿಯಿಂದ ಮಾಡಿದ್ದಿರಬೇಕು. ಉಪವಾಸದ ದಿನ ನಮ್ಮಯ ಇಂದ್ರಿಯಗಳೆಲ್ಲವೂ ಚುರುಕಾಗಿರುವುದನ್ನು ನಾನೂ ಗಮನಿಸಿದ್ದೇನೆ. ಆಹಾರದ ನಿಜವಾದ ಮೌಲ್ಯ ತಿಳಿಯುವುದು ಉಪವಾಸದ ದಿನದಂದು. ಹಾಗಾಗಿ ಧಾರ್ಮಿಕ ಕಾರಣಗಳನ್ನು ಒಡ್ಡಿ ಉಪವಾಸದ ಸಮಾಪ್ತಿಗೆ ಅನ್ನದಾನದ ಲೇಪವಿಟ್ಟಿರಬಹುದು.
ದಿನದಿನವೂ ಹೊಸತಿರಬೇಕೆಂದು ತುಡಿಯುವ ಇಂದಿನವರಿಗೆ ಉಪವಾಸದ ವ್ಯಾಖ್ಯಾನ ಸರಿ ಹೊಂದಲಿಕ್ಕಿಲ್ಲ. ಕೆಲವೇ ದಿನಗಳ ಜೀವನವನ್ನು ಅತಿ ಅಶಿಸ್ತಿನ ಪರಿಧಿಯೊಳಗೆ ಕಳೆದು ಅದನ್ನೇ 'ಎಂಜಾಯ್ಮೆಂಟ್' ಎನ್ನುವ ಈಗಿನ ಮಂದಿಗೆ ಊಟ ಚೆಲ್ಲುವುದೂ ಒಂದು ಪ್ರತಿಷ್ಠೆಯ ವಿಷಯವಾಗಿದೆ. ಆಹಾರವನ್ನು ಚೆಲ್ಲುವವರು ಹೆಚ್ಚಿದಂತೆಲ್ಲಾ ಊಟಕ್ಕಾಗಿ ಪರದಾಡುವ ಮಂದಿಯೂ ಹೆಚ್ಚಾಗುತ್ತಿದ್ದಾರೆ. ಸರ್ಕಾರ ಎಷ್ಟೇ 'ಭಾಗ್ಯ'ಗಳನ್ನು ತಂದರೂ ಆಹಾರದ ಕೊರತೆಯನ್ನು ನೀಗಿಸಲು ಶಿಸ್ತಿಲ್ಲದೇ ಆಗುವುದಿಲ್ಲ. ಎಷ್ಟೋ ಜ್ಞಾನಿಗಳೇ ಆಹಾರದ ಬಗ್ಗೆ ತಾತ್ಸಾರ ತೋರುವಾಗ ಅಜ್ಞಾನಿಗಳನ್ನು ಕೇಳುವ ಹಾಗೆಯೇ ಇಲ್ಲ. ಆಹಾರದ ಕೊರತೆ ನೀಗುವವರೆಗೂ ಎರಡು ತರಹದ ಆಹಾರಾನ್ವೇಷಣೆಗಳು ನಡೆಯುತ್ತಲೇ ಇರುತ್ತವೆ - ಒಂದು ನನ್ನಂತಹ ಉಳ್ಳವನ ಆನಂದದ ಆಹಾರಾನ್ವೇಷಣೆ, ಮತ್ತೊಂದು ಇಲ್ಲದಿರುವವನ ಹೊಟ್ಟೆಪಾಡಿನ ಆಹಾರಾನ್ವೇಷಣೆ.

ಆಹಾ! ಎಂಥಾ ರುಚಿಕಟ್ಟಾದ ವರ್ಣನೆಯನ್ನು ಮಾಡಿರುವಿರಿ. ಬರೀ ಓದಿದರೂ ಸಹ ನನ್ನ ಬಾಯಲ್ಲಿ ನೀರೂರಿತು!
ReplyDelete