ಪರಮಾನಂದದ ಎಣಿಕೆಯಲಿ ತಲ್ಲಣದ ಕ್ಷಣಗಳು,
ಪ್ರತಿಯೊಂದು ಕ್ಷಣದಲೂ ಅಡಗಿವೆ ಯುಗಗಳು,
ದೇಹವ ಸೀಳಿದ ಆಕ್ರಂದನವೇ ಆನಂದ,
ಗರ್ಭದಿ ಪೊರೆದ ಕುಡಿಯ ದರ್ಶನವೇ ಚೆಂದ.
ಜೀವನಾನುಭವದ ಮತ್ತೊಂದು ಮಜಲು,
ಅದೇನು ಸುಖವು ಕೈಯಲ್ಲಿ ನೀನಿರಲು,
ನಿನ್ನ ನಗುವಿನಲಿ ಕಂಡೆವು ಸ್ವರ್ಗ,
ಮೋಕ್ಷಕೂ ನೀನಾದೆ ನಮ್ಮಯ ಮಾರ್ಗ.
ನಿನ್ನಯ ಹಠದಲಿ ನಾವೊಮ್ಮೆ ಸೋತು,
ನಿನ್ನ ನಿಷ್ಕಲ್ಮಶ ನಗುವಲಿ ಜಗವನೇ ಮರೆತು,
ನಾವು ನಿನ್ನ ಪಾಲಕರೋ, ನೀ ನಮ್ಮ ಪಾಲಕಿಯೋ?
ನಮ್ಮೊಳಿನ ದಾನವರ ದರ್ಶಿಸಿದ ಕನ್ನಡಿಯೋ?
ತಾಳ್ಮೆಯನು ಕಳಿಸಿದೆ, ಪ್ರೀತಿಯನೂ ಸ್ಫುರಿಸಿದೆ,
ನಿನ್ನ ಪ್ರಶ್ನೆಗಳಲಿ ನಮ್ಮನೂ ಸೋಲಿಸಿದೆ,
ತಾಯಿಯಾದೆ, ಮಗುವಾದೆ, ವಿಕೃತಿಯೂ ಮೆರೆದೆ,
ಜೊತೆಯಲೇ ಬೆಳೆದು ನಮ್ಮನೂ ಸಲುಹಿದೆ.
ಹರನ ವರದಿಂದ, ಹರಿಯ ಕೃಪೆಯಿಂದ,
ಗರ್ಭದೆದೆಯಿಂದ, ಜನನ ಕಾರಣದಿಂದ,
ನೀ ನಮ್ಮ ಅಂಶ, ನೀ ನಮ್ಮ ವಂಶ,
ಈ ಸಂಸಾರ ಸ್ವರ್ಗದ ಪುಟಕ್ಕಿಟ್ಟ ಕಲಶ.
ಮುಗ್ಧತೆಯ ಮೂರ್ತಿ, ಮನವೊ ಸ್ಫಟಿಕ,
ಜಂಜಡದ ಮುಳ್ಳಿನಲಿ ಹೂವಿನ ಪ್ರತೀಕ.
ಈ ನಮ್ಮ ಬಾಳಿನಲಿ ಕುವರಿ ನೀ ಬಂದು,
ನೀನಾದೆ ನಮಗೆ ಆನಂದಬಿಂದು.
ಸಾಗಲಿ ಹೀಗೆಯೇ ನಮ್ಮ ಹಗ್ಗಜಗ್ಗಾಟ,
ನಿಲ್ಲದಿರಲಿ ನಮ್ಮ ಪ್ರೀತಿ ತಿಕ್ಕಾಟ,
ನಮ್ಮ ಸಿಟ್ಟಿಗೆ, ನಿನ್ನ ಸೆಡವಿಗೆ ಜೀವಮಾನದ ಅವಧಿ,
ನಾವು ನದಿಯಾದರೆ ನೀ ನಮ್ಮ ಶರಧಿ.
No comments:
Post a Comment