Thursday, February 7, 2013

ಸೂತಕ


ಕರಿಮಾರಿಯೊಂದು ನೋಡುತಲಿ ಇಣುಕಿ ಇಣುಕಿ,
ಪ್ರೀತಿಯ ಅಪ್ಪುಗೆಯೊಳಿಟ್ಟು ಪಾಶದ ಬೆಂಕಿ,
ಪ್ರೀತಿಸುವಳು, ಬರ ಸೆಳೆವಳು, ಮೈಮರೆಸುವಳು,
ಪರರ ಮೃತ್ಯುವಿನ ಭೋಜನದಲಿ ತಾ ಬದುಕಿಹಳು.


ಅವಳ ಹಾಡು - ಇಂಪಲ್ಲ, ಘೋರ,
ಅವಳ ನರ್ತನವು ತಾಂಡವ ಪ್ರಕಾರ,
ಹೃದಯಗಳಲಿ ಕಂದಕಗಳನು ಕೊರೆದು,
ಮನೆ ಮುಂದೆ ಹೊಗೆಯಿಟ್ಟು, ಮನವ ಮಾಡಿ ಬರಿದು.


ಅಗಲಿಕೆಯ ಆಕ್ರಂದನ, ಕ್ರೂರ ನಿಶ್ಶಬ್ದ,
ಕಡೆ ತನಕ ದುಃಖದ ಪಸೆಯ ಪ್ರಾರಬ್ಧ,
ಅವಳು ಬಾರದೆ ಇರುವ ಮನೆಯಿಲ್ಲ,
ಅವಳಿರದೆ ಸೃಷ್ಟಿಯ ಸ್ಫೂರ್ತಿಯಿಲ್ಲ.


ಹಠಾತ್ತನೆ ತನ್ನವರ ಕಳೆದುಕೊಂಡಿರುವ ದುಃಖ,
ಜಗವು ಹೇಳುವುದು ಕಲಿ ಇಷ್ಟು ದಿನದ ಸೂತಕ,
ಮೈಲಿಗೆಯಾಗಿರುವೆ ನೀನು, ದೇವರ ನೆನೆಯಬೇಡ!
ನನ್ನನು ಯೋಚಿಸದೆ ನಾನು ಹೇಗಿರಬೇಡ?


ಯಾವ ಕಾರಣಕೆ ಮಾಡಿದರೋ ಸೂತಕ-ವೃದ್ಧಿಯ ಪ್ರಥೆ?
ಹುಟ್ಟಿದರೂ ಮೈಲಿಗೆ, ಸತ್ತರೂ ಮೈಲಿಗೆ - ಇದೇನು ಕತೆ?
ಪರಂಪರೆಯ ಹೆಸರಿನಲಿ ಮೂಧನಂಬಿಕೆಯ ಅಮಲು,
ಪ್ರಶ್ನಿಸಿದರೆ ಉತ್ತರವಿಲ್ಲ - ಹೆಸರಿಡುವರು ಉದ್ಧಟತನದ ತೆವಲು.


ಮಾತಿನಲೇ ಮೇರುಗಿರಿಯ ಮೆಟ್ಟಿಸುವರು ಮಂದಿ,
ಮನುಷ್ಯತ್ವವ ಕೊಂದು ತರುವರು ಬೇಗುದಿ,
ಅದು ನಿತ್ಯ ಸೂತಕ, ಅದು ಕಡೆ ತನಕ,
ದಿನವೂ ಅಳುವವರಿಗೆ ಕೇಳುವರೇ ಜಾತಕ?





2 comments:

  1. ರಾಹುಲ,
    ನಿಮ್ಮ ಮಾತು ನಿಜ. ಕುರುಡು ಸಂಪ್ರದಾಯಗಳು ವ್ಯಥೆಗೆ ಕಾರಣವಾಗಿವೆ.

    ReplyDelete
    Replies
    1. ಹೌದು ಸುನಾಥ್ ಅವರೇ, ದಿನದಿನವೂ ಅದನ್ನೆ ನೋಡಿ ಬೇಜಾರಾಗಿ ಬಂದ ಪದ್ಯ ಇದು...

      Delete