ಏಕಾಣುವಾಗಿರಲು ಅನಂತದ ಅನುಭವವು,
ಬೆಳೆದಂತೆ ತಿಳಿಯಿತು ಅದು ನಮ್ಮ ರಕ್ಷಣೆಯು,
ಸುತ್ತಲೂ ಕೋಟೆಯಂತೆ, ಅದುವೇ ಮೊಟ್ಟೆಯಂತೆ,
ಸೀಳಿ ಹೊರಬಂದು ಚೀರಿದರೆ ಜನ್ಮವಂತೆ.
ಕಣ್ಣು ಕಾಣಿಸದು, ರೆಕ್ಕೆ ಬಲಿತಿಲ್ಲ,
ಅವಲಂಬನೆಯೇ ಜೀವನ, ಬೇರೆ ಗತಿಯಿಲ್ಲ,
ಹೊಸ ಜಗದ ಇರುವು ತಿಳಿಯಿತು ಈಗ,
ಅದನು ನೋಡುವ ತವಕ ಆದಷ್ಟು ಬೇಗ.
ರೆಕ್ಕೆ ಬಲಿತು ಹಕ್ಕಿಯು ಗೂಡು ಬಿಟ್ಟಿತು,
ಸ್ವಾತಂತ್ರ್ಯಕೆ ಬೀಗಿ ನೂರ್ಮಡಿ ಖುಷಿ ಪಟ್ಟಿತು.
ಹೊಸ ಆಗಸದ, ಹೊಸ ಜೀವನದ ಕನಸು ಕಟ್ಟಿತು,
ದಿನವೂ ಜೀವಿಸಿ, ದಿನವ ಸವೆಸಿ ಸೋತು ಬಿಟ್ಟಿತು.
ನಿತ್ಯವೂ ಹೊಸತಿನ ಎಣಿಕೆ, ಹಸನಾದ ಜೀವನ,
ಕನಸಲ್ಲಿ ಕಂಡ ಜಗದ ತುಣುಕಿನ ಮನನ,
ಆದರೆ ಯಾಂತ್ರಿಕವಿದು, ಅದೇ ಅನುರಣನ,
ಅದೇ ಹುಟ್ಟು, ಅದೇ ತುಡಿತ, ಅದೇ ಮರಣ.
ದಿನಗಳು ಉರುಳುವುವು, ಕಾಲವೂ ಕಳೆಯುವುದು,
ಕಸುವು ತೀರುವುದು, ಮುಪ್ಪು ಅಡರುವುದು,
ಹೊಸ ಜಗದ ಆಸೆಯ ನೆನಪೇ ದಾರುಣ,
ಹೇಗೆ ಮಾಡುವುದು ಅದರ ಪುನರಾನ್ವೇಷಣ.
ತಿರುಗುವ ಸುಳಿಯಂತಾಗಲು ಉಸಿರು ಕಟ್ಟುವ ಭಾಸ,
ಏನು ಹೊಸತು ಮಾಡಲಿ? ಸೋಲಿನ ಆಭಾಸ,
ಎಲ್ಲರ ಕಥೆಯೇ ಇದು, ನಾ ಹೇಗೆ ಬೇರೆಯಾಗಲಿ?
ಏನು ಹುಡುಕಲಿ, ಏನು ಮಾಡಲಿ, ಸಾರ್ಥಕತೆಯ ಹೇಗೆ ಕಾಣಲಿ?
ಈ ಯೋಚನೆಯೇ ಭವಸಾಗರದಂತಾಯಿತು ,
ಅನಂತದ ಅನುಭವವು, ಯುಕ್ತಿಯಲಿ ತಿಳಿಯಿತು,
ಯೋಚನೆಗಳೇ ನಮ್ಮ ಮೊಟ್ಟೆ, ಸೀಳಿದರೆ ಜನ್ಮ,
ಕಟ್ಟುತಲಿರಬೇಕು, ಸೀಳುತಲಿರಬೇಕು, ಪಡೆಯಬೇಕು ಪುನರ್ಜನ್ಮ.
ಯೋಚನೆಗಳ ಬೇಲಿಯಲಿ ಬಂದಿಯಾದರೆ,
ಹೊಸತೆನ್ನುವುದು ಜೀವನದಲಿ ಬಿಸಿಲ್ಗುದುರೆ,
ಕೊಂಚವೇ ಧೈರ್ಯದಲ್ಲಿ, ಮೊಟ್ಟೆಯನು ಸೀಳುವೆ,
ಹೊಸ ಕನಸಿನ ಹೊಸ ಆಗಸಕೆ ನಾ ಹಾರುವೆ.